Saturday 7 April 2018

Milinda panha 11.7. ಕುಂಭ ವಗ್ಗೋ

7. ಕುಂಭ ವಗ್ಗೋ


1. ಕುಂಭಂಗ ಪನ್ಹೋ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ನೀರಿನ ಮಡಿಕೆಯ ಗುಣ ಯಾವುದು? (276)
ಓ ಮಹಾರಾಜ, ಹೇಗೆ ತುಂಬುನೀರಿನ ಮಡಿಕೆಯು ಶಬ್ದ ಮಾಡುವುದಿಲ್ಲವೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸಮಣತ್ವದ ಶಿಖರವನ್ನು ಪ್ರಾಪ್ತಿಮಾಡಿದಾಗ ಆತನಿಗೆ ಸಂಪ್ರದಾಯವೆಲ್ಲವೂ ತಿಳಿಯುತ್ತದೆ. ಹಾಗೆಯೇ ಕಲಿಯುವಿಕೆ ಮತ್ತು ಅರ್ಥವಿವರಣೆ ಎಲ್ಲವೂ ತಿಳಿಯುತ್ತಾನೆ. ಆದರೂ ಆತನ ಶಬ್ದಗಳನ್ನು ಮಾಡುವುದಿಲ್ಲ. ಅದರಿಂದಾಗಿ ಅಹಂಕಾರಪಡುವುದಿಲ್ಲ, ಅದನ್ನು ತೋರಿಸಿಕೊಳ್ಳಲು ಹೋಗುವುದಿಲ್ಲ. ಬದಲಾಗಿ ಅಹಂಕಾರ ಮತ್ತು ಸ್ವಶೀಲತೆಯಿಂದ ದೂರವೇ ಇರುತ್ತಾನೆ. ಆತನು ನೇರವಾಗಿ ಸ್ಪಷ್ಟವಾಗಿಯೇ ಇರುತ್ತಾನೆ ಹೊರತು ವಾಚಾಳಿ ಬಾಯಿಬಡುಕ ಆಗಿರುವುದಿಲ್ಲ. ಹಾಗೆಯೇ ಪರರನ್ನು ಕೀಳಾಗಿ ಕಾಣುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನೀರಿನ ಮಡಿಕೆಯ ಗುಣವಾಗಿದೆ. ಇದರ ಬಗ್ಗೆ ಭಗವಾನರು ದೇವಾದಿದೇವರು ಸುತ್ತನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಯಾವುದು ತುಂಬಿಲ್ಲವೋ ಅದೇ ಸದ್ದು ಮಾಡುತ್ತದೆ. ಯಾವುದು ತುಂಬಿದೆಯೋ ಅದು ಶಬ್ದರಹಿತವಾಗಿ ಶಾಂತವಾಗಿರುತ್ತದೆ. ಮೂರ್ಖರು ಖಾಲಿ ಮಡಿಕೆಗಳಂತೆ, ಜ್ಞಾನಿಗಳಾದರೋ ಆಳವಾದ ಪ್ರಶಾಂತ ಸರೋವರದಂತೆ, ಸ್ಪಷ್ಟವಾಗಿ ಮತ್ತು ಪೂರ್ಣರಾಗಿರುತ್ತಾರೆ.

2. ಕಾಲಾಯಸಂಗ ಪನ್ಹೊ (ಕಪ್ಪು ಕಬ್ಬಿಣ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಕಪ್ಪು ಕಬ್ಬಿಣದ 2 ಗುಣ
ಗಳಾವುವು? (277)
ಹೇಗೆ ಓ ಮಹಾರಾಜ, ಕಬ್ಬಿಣವು ಅಪಾರ ಹೊಡೆತಕ್ಕೆ ಈಡಾದರೂ ಅದೇ ಭಾರವನ್ನು, ಹೊಂದಿರುವುದೋ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು, ಯತ್ನದಲ್ಲಿ ಜಾಗರೂಕನಾಗಿ, ಸಮರ್ಥನಾಗಿ, ಯೋಗ್ಯವಾದ ಗಮನಹರಿಸುತ್ತ ಭಾರವಾದ ಹೊರೆಯನ್ನು ಅಂದರೆ ಶ್ರೇಷ್ಠವಾದ ಕಾರ್ಯವನ್ನು ಕೈಗೆತ್ತಿಕೊಂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಕಬ್ಬಿಣದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಕಾದ ಕಬ್ಬಿಣವು ತಾನು ಹೀರಿದ ನೀರನ್ನು ವಾಂತಿ ಮಾಡುವುದಿಲ್ಲವೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಪರಮಶ್ರೇಷ್ಠ ಬುದ್ಧರನ್ನು, ಪರಿಪೂರ್ಣ ಧಮ್ಮವನ್ನು ಮತ್ತು ಉತ್ತಮೋತ್ತಮ ಸಂಘವನ್ನು ಅರಿತಮೇಲೆ, ಎಂದಿಗೂ ತ್ರಿರತ್ನದ ಮೇಲಿನ ಶ್ರದ್ಧೆಯನ್ನು ತ್ಯಜಿಸುವುದಿಲ್ಲ. ಹಾಗೆಯೇ ಪಂಚಖಂಧಗಳು (ದೇಹ ಮನಸ್ಸುಗಳು) ಅನಿತ್ಯ ಎಂದು ಸ್ಪಷ್ಟವಾಗಿ ಅರಿತು, ಆ ಸಮ್ಮಾದೃಷ್ಟಿಯನ್ನು ತೊರೆಯುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಕರಿ ಕಬ್ಬಿಣದ ದ್ವಿತೀಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ:
ಯಾರ ಪ್ರಜ್ಞಾವು ಪರಿಶುದ್ಧವಾಗಿದೆಯೋ, ಆರ್ಯಧಮ್ಮದಲ್ಲಿ ಪಳಗಿರುವನೋ, ಸತ್ಯಗಳನ್ನು ಅವು ಇರುವಂತೆಯೇ ಅರಿತು ವ್ಯತ್ಯಾಸಗಳನ್ನು ತಿಳಿದಿರುವನೋ, ಆತನಿಗೆ ಖಂಡಿಸಬೇಕಾದ ಅಗತ್ಯವಿಲ್ಲ. ಆತನು ಭಾಗ ಮಾತ್ರದಲ್ಲಿ ಪೂರ್ಣವಾಗಿ ಅರಹತ್ವದ ಸ್ಪಷ್ಟ ಉನ್ನತಿ ಪಡೆಯುತ್ತಾನೆ.

3. ಛತ್ತಂಗ ಪನ್ಹೊ (ಛತ್ರಿಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಛತ್ರಿಯ ಮೂರು ಗುಣ
ಗಳಾವುವು? (278)
ಹೇಗೆ ಓ ಮಹಾರಾಜ, ಛತ್ರಿಯು ಒಬ್ಬನ ಮೇಲೆಯೇ ಉದ್ದಕ್ಕೂ ಹೋಗುವುದೋ ಅದೇರೀತಿ ಧ್ಯಾನಶೀಲ ಭಿಕ್ಷುವು ತನ್ನ ಯತ್ನದಲ್ಲಿ ಜಾಗರೂಕನಾಗಿ, ಎಲ್ಲಾ ಕ್ಲೇಷಗಳಿಂದ ಮೇಲಕ್ಕೆ ಇರುವಂತಹ ಚಾರಿತ್ರ್ಯವುಳ್ಳವನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಛತ್ರಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಛತ್ರಿಯನ್ನು ಹಿಡಿಯಿಂದ ಹಿಡಿದು ತಲೆಯ ಮೇಲಕ್ಕೆ ಹಿಡಿದಿರುತ್ತಾರೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ ಜ್ಞಾನೋಚಿತವಾದ ಗಮನಹರಿಸುವಿಕೆಯ ಹಿಡಿಯನ್ನು ಹಿಡಿದಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಛತ್ರಿಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಛತ್ರಿಯು ಗಾಳಿಯಿಂದ, ಮಳೆಯಿಂದ, ತಾಪದಿಂದ ರಕ್ಷಣೆ ನೀಡುತ್ತದೆಯೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಅಸಂಖ್ಯಾತ ಮಿಥ್ಯಾಸಮಣರ ಬ್ರಾಹ್ಮಣರ ಟೊಳ್ಳು ನಂಬಿಕೆಗಳು, ಟೊಳ್ಳು ಸಿದ್ಧಾಂತಗಳ ಗಾಳಿಯಿಂದ ಪಾರಾಗುತ್ತಾನೆ. ಹಾಗೆಯೇ ತ್ರಿವಿಧ ಅಗ್ನಿಗಳಿಂದ (ರಾಗ, ದ್ವೇಷ, ಮೋಹ) ಪಾರಾಗುತ್ತಾನೆ ಮತ್ತು ಕ್ಲೇಷಗಳ ಮಳೆಯಿಂದಲೂ ಪಾರಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಛತ್ರಿಯ ತೃತೀಯ ಗುಣವಾಗಿದೆ. ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಹೇಗೆ ಅಗಲವಾಗಿ ಹರಡಿರುವ ದೃಢವಾದ ಛತ್ರಿಯು ರಂಧ್ರಗಳಿಲ್ಲದೆ ಕಡ್ಡಿಯಿಂದ, ಅಂಚುಕಟ್ಟುನಿಂದ ಇದ್ದು ಸುಡುವ ತಾಪದಿಂದ ಮತ್ತು ದೇವತೆಗಳ ಬೃಹತ್ ಮಳೆಯಿಂದ ಕಾಪಾಡುತ್ತದೋ ಅದೇರೀತಿ ಬುದ್ಧರ ಮಕ್ಕಳು ಆಂತರ್ಯದಿಂದ ಶ್ರೇಷ್ಠವಾಗಿದ್ದು, ಶೀಲಛತ್ರಧಾರಿಗಳಾಗಿ ಕ್ಲೇಷಗಳ ಮಳೆಯನ್ನೇ ದೂರೀಕರಿಸುವರು. ಹಾಗೆಯೇ ತ್ರಿವಿಧದ ಅಗ್ನಿಯು ಭೀಕರ ತಾಪವನ್ನು ದೂರೀಕರಿಸುವರು.

4. ಖೆತಂಗ ಪನ್ಹೊ (ಭತ್ತದ ಗದ್ದೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಿರುವ ಭತ್ತದ ಗದ್ದೆಯ 3 ಗುಣ
ಗಳಾವುವು? (279)
ಹೇಗೆ ಓ ಮಹಾರಾಜ, ಭತ್ತದ ಗದ್ದೆಯು ನೀರಾವರಿಯ ಕಾಲುವೆಗಳಿಂದ ಕೂಡಿರುತ್ತದೆಯೋ ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸುಶೀಲ ಮನುಷ್ಯನ ಹಲವಾರು ನಿಯಮಗಳನ್ನು ಪಾಲಿಸುತ್ತಾನೆ. ಅದೇ ಆತನಿಗೆ ಕಾಲುವೆಗಳ ಹಾಗೆ, ಆಗ ಬುದ್ಧರ ಧಮ್ಮದ ಗದ್ದೆಯಲ್ಲಿ ನೀರು ಹರಿಯುತ್ತದೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಭತ್ತದ ಗದ್ದೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಭತ್ತದ ಗದ್ದೆಯು ಅಣೆಕಟ್ಟಿಗೆ ಹೊಂದಿಸಲಾಗಿರುತ್ತದೋ ಅದರಿಂದ ನೀರು ಹರಿದು ಭತ್ತವು ಫಲವತ್ತತೆಗೆ ಬರುವುದೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸಮ್ಯಕ್ ಜೀವನದ ಅಣೆಕಟ್ಟನ್ನು ಹೊಂದಿಸಿಕೊಂಡಿರುತ್ತಾನೆ ಮತ್ತು ಪಾಪಲಜ್ಜೆ ಮತ್ತು ಸಮಣತ್ವದಲ್ಲಿ ದೃಢನಾಗಿದ್ದು ಫಲಗಳನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಭತ್ತದ ಗದ್ದೆಯ ದ್ವಿತೀಯ ಲಾಭವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಭತ್ತದ ಗದ್ದೆಯು ಫಲಕಾರಿಯೋ, ರೈತನಿಗೆ ಆನಂದ ತರುವುದೋ, ಬೀಜ ಅತಿ ಚಿಕ್ಕದ್ದಾಗಿದ್ದರೂ ಬೆಳೆಯು ಅಪಾರವೋ, ಬೀಜಗಳು ಹೆಚ್ಚಾದಷ್ಟು ಅಪಾರ ಬೆಳೆಯೋ ಅದೇರೀತಿಯಲ್ಲಿ ಭಿಕ್ಷುವು ಸಹಾ ಧ್ಯಾನಶೀಲನಾಗಿ ಪ್ರಯತ್ನದಲ್ಲಿ ಜಾಗರೂಕನಾಗಿ ಲೋಕೋತ್ತರ ಫಲಗಳನ್ನು ಪಡೆದು ಆತನ ಅವಲಂಬಿತರು ಅಪಾರ ಆನಂದಪಡುವರು. ಹೀಗಾಗಿ ಅಲ್ಪವನ್ನು ನೀಡಿ, ಮಹತ್ತರ ಫಲಿತಾಂಶ ಇದರಲ್ಲಿ ಪಡೆಯುತ್ತಾನೆ ಮತ್ತು ಸ್ವಲ್ಪ ಹೆಚ್ಚು ನೀಡಿದಾಗ ಅತಿಮಹತ್ತರ ಫಲಿತಾಂಶ ಪಡೆಯುತ್ತಾನೆ. ಇದೇ ಓ ಮಹಾರಾಜ, ಭತ್ತದ ಗದ್ದೆಯು ಹೊಂದಿರುವ ತೃತೀಯ ಗುಣವಾಗಿದೆ. ಇದನ್ನು ಭಿಕ್ಷುಗಳು ಹೊಂದಿರುತ್ತಾರೆ. ಇದರ ಬಗ್ಗೆ ಓ ಮಹಾರಾಜ, ವಿನಯಧರರಾದ ಉಪಾಲಿ ಥೇರರು ಹೀಗೆ ಹೇಳಿದ್ದಾರೆ:
ಭತ್ತದ ಬೆಳೆಯ ಹಾಗೆ ಫಲಕಾರಿಯಾಗಿರಿ, ಎಲ್ಲಿ ಫಲವತ್ತಾದ ಭೂಮಿಯು ಇರುತ್ತದೋ ಅಲ್ಲಿ ಎಲ್ಲವೂ ಸುಖಮಯವಾಗುವುದು, ಅಲ್ಲಿ ಬಿತ್ತುವವರಿಗೆ ಫಲಮಯ ಬೆಳೆ ದೊರೆಯುತ್ತದೆ.

5. ಅಗದಂಗ ಪನ್ಹೊ (ಔಷಧದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಿರುವ ಔಷಧಿಯ 2 ಗುಣಗಳಾವುವು?(280)
ಓ ಮಹಾರಾಜ, ಹೇಗೆ ಔಷಧದಿಂದ ಹುಳುಗಳು ಉದಯಿಸಲಾರವೋ ಹಾಗೆಯೇ ಧ್ಯಾನಶೀಲ, ಸತತ ಜಾಗರೂಕನಲ್ಲಿ ಕ್ಲೇಷಗಳು ಉದಯಿಸಲಾರವು. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಔಷಧದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಔಷಧಿಯು ಸೇವಿಸಿದಾಗ ಅದು ಪ್ರತ್ಯೌಷಧದಂತೆ ಕಾರ್ಯಮಾಡಿ ಕಡಿತದಿಂದ ಅಥವಾ ಸ್ಪರ್ಶದಿಂದ ಆಗಿರುವ ವಿಷವನ್ನು ನಾಶಗೊಳಿಸುವುದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ರಾಗ, ದ್ವೇಷ, ಮೋಹ, ಅಹಂಕಾರ, ಮಿಥ್ಯಾದೃಷ್ಟಿಗಳ ಎಲ್ಲಾ ವಿಷಗಳನ್ನು ತನ್ನಲ್ಲೇ ನಾಶಗೊಳಿಸಿ ಕೊಳ್ಳುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಔಷಧಿಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ:
ಧ್ಯಾನಶೀಲ ಭಿಕ್ಷುವು ಸಂಖಾರಗಳ ಸತ್ಯದ ಸ್ವರೂಪ ಅರ್ಥವನ್ನು ನೋಡಲು ಬಯಸುತ್ತಾನೆ, ಆಗ ಅದೇ ಪ್ರತ್ಯೌಷಧಿಯಾಗಿ ಕ್ಲೇಷಗಳ ವಿನಾಶವಾಗುತ್ತದೆ.

6. ಭೋಜನಂಗ ಪನ್ಹೊ (ಭೋಜನದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಿರುವ ಭೋಜನದ ಮೂರು ಗುಣ
ಗಳಾವುವು? (281)
ಓ ಮಹಾರಾಜ, ಹೇಗೆ ಆಹಾರವು ಎಲ್ಲಾ ಜೀವಿಗಳಿಗೂ ಪೋಷಣೆ ಆಧಾರ ನೀಡುವುದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸರ್ವಜೀವಿಗಳಿಗೂ ಆರ್ಯ ಅಷ್ಠಾಂಗ ಮಾರ್ಗದ ಬಾಗಿಲಿನ ಹಿಡಿಯಾಗುತ್ತಾನೆ. ಅದರಿಂದಾಗಿ ಸರ್ವಜೀವಿಗಳು ಲಾಭ ಪಡೆಯುತ್ತಾರೆ. ಇದೇ ಓ ಮಹಾರಾಜ, ಆಹಾರದಲ್ಲಿನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಹಾರವು ಜನರ ಶಕ್ತಿಯನ್ನು ಹೆಚ್ಚಿಸುತ್ತದೋ, ಹಾಗೆಯೇ ಧ್ಯಾನಶೀಲ ಭಿಕ್ಷುವು ಸಹಾ ತನ್ನ ಶೀಲದಿಂದ ಶಕ್ತಿಯನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಹಾರವು ಸರ್ವರಿಂದಲೂ ಇಷ್ಟವಾಗಬಲ್ಲದೋ ಅದೇರೀತಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ದೃಢನಾಗಿ, ಇಡೀ ಲೋಕದಿಂದ ಇಷ್ಟಪಡಲ್ಪಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷವು ಹೊಂದಬೇಕಾದ ಭೋಜನದ ತೃತೀಯ ಗುಣವಾಗಿದೆ. ಇದರ ಬಗ್ಗೆ ಮಹಾ ಮೊಗ್ಗಲಾನರವರು ಹೀಗೆ ಹೇಳಿದ್ದಾರೆ:
ಸಂಯಮದಿಂದ, ಶಿಕ್ಷಣದಿಂದ, ಶೀಲದಿಂದ, ಕರ್ತವ್ಯದಿಂದ, ಫಲಗಳನ್ನು ಪ್ರಾಪ್ತಿಗೊಳಿಸುತ್ತಾರೆ. ಅಂತಹ ಭಿಕ್ಷುವು ಸರ್ವಲೋಕಗಳಿಂದ ಇಷ್ಟಪಡಲ್ಪಡುತ್ತಾನೆ.

7. ಇಸ್ಸಾಸಂಗ ಪನ್ಹೋ

ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಬಿಲ್ಗಾರನ ನಾಲ್ಕು ಗುಣಗಳು ಯಾವುವು? (282)
ಹೇಗೆ ಓ ಮಹಾರಾಜ, ಬಿಲ್ಗಾರನು ಬಾಣಗಳನ್ನು ಬಿಡುವಾಗ ತನ್ನ ಎರಡು ಕಾಲುಗಳನ್ನು ನೆಲದಲ್ಲಿ ಊರಿರುತ್ತಾನೆ. ತನ್ನ ಮೊಣಕಾಲನ್ನು ನೇರವಾಗಿಟ್ಟಿರುತ್ತಾನೆ. ತನ್ನ ಬತ್ತಳಿಕೆಯನ್ನು ಸೊಂಟಕ್ಕೆ ಲಂಬವಾಗಿಟ್ಟಿರುತ್ತಾನೆ. ಇಡೀ ದೇಹವನ್ನು ಸ್ಥಿರವಾಗಿ ಇಟ್ಟಿರುತ್ತಾನೆ. ಎರಡು ಕೈಗಳು ದೃಢವಾಗಿರುತ್ತದೆ, ಆತನು ಮುಷ್ಟಿಯು ಮುಚ್ಚಿದ್ದು, ಬೆರಳುಗಳ ನಡುವೆಯಾದ ರಂಧ್ರವು ಕಾಣಿಸುವುದಿಲ್ಲ, ತನ್ನ ಕುತ್ತಿಗೆಯನ್ನು ಚಾಚಿರುತ್ತಾನೆ. ಬಾಯನ್ನು ಮುಚ್ಚಿ, ಒಂದೇ ಕಣ್ಣಿನಿಂದ ಗುರಿ ಇಡುತ್ತಾನೆ ಮತ್ತು ಹೀಗೆ ಯೋಚಿಸುತ್ತಾನೆ ನಾನು ಅದನ್ನು ಹೊಡೆಯುವೆ. ಅದೇರೀತಿಯಾಗಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸತ್ಯದ ಆಧಾರದ ಮೇಲೆ ತನ್ನ ಪಾದಗಳನ್ನು ದೃಢವಾಗಿ ಊರಿರುತ್ತಾನೆ. ತನ್ನ ಹೃದಯದಲ್ಲಿ ದಯೆಯಿಂದಾಗಿ ಕೋಮಲಗೊಳಿಸುತ್ತಾನೆ, ಮನಸ್ಸನ್ನು ಇಂದ್ರಿಯ ನಿಗ್ರಹದಲ್ಲಿ ಇಟ್ಟಿರುತ್ತಾನೆ. ಸಂಯಮ ಮತ್ತು ಕರ್ತವ್ಯಪರತೆಯಿಂದ ಸಿದ್ಧನಾಗಿರುತ್ತಾನೆ. ಉದ್ರೇಕ ಮತ್ತು ಭೀತಿಯನ್ನು ಧಮಿಸಿರುತ್ತಾನೆ. ನಿರಂತರ ಯೋಚನೆಯಿಂದಾಗಿ ಮಧ್ಯೆ ರಂಧ್ರಗಳನ್ನು (ವಿಶ್ರಾಂತಿ, ಚಂಚಲತೆ) ಬಿಡಲಾರ. ಉತ್ಸಾಹದಿಂದ ಮುನ್ನುಗ್ಗುತ್ತಾನೆ. ಆರು ಇಂದ್ರೀಯಗಳ ದ್ವಾರಗಳನ್ನು ಮುಚ್ಚಿರುತ್ತಾನೆ. ಸತತ ಸ್ಮೃತಿವಂತನಾಗುತ್ತಾನೆ ಮತ್ತು ಆನಂದದಿಂದ ಹೀಗೆ ಯೋಚಿಸುತ್ತಾನೆ: ನನ್ನ ಜ್ಞಾನದ ಈಟಿಯಿಂದ, ನಾನು ನನ್ನ ಕ್ಲೇಷಗಳೆಲ್ಲವನ್ನು ಸಿಗಿದುಹಾಕುವೆ. ಇದೇ ಓ ಮಹಾರಾಜ, ಬಿಲ್ಗಾರನು ಹೊಂದಿರುವ ಭಿಕ್ಷುವು ಹೊಂದಬೇಕಾದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಿಲ್ಗಾರನು ಸಾಧನವನ್ನು ಹೊಂದಿದ್ದು, ಅದರಿಂದಾಗಿ ಬಾಗಿದ ಮತ್ತು ವಕ್ರವಾಗಿರುವ ಅಸಮವಾಗಿರುವ ಬಾಣಗಳನ್ನು ನೇರವಾಗಿಸಿಕೊಳ್ಳುತ್ತಾನೆ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಕಾಯದಲ್ಲಿ ಸತಿಪಟ್ಠಾನವನ್ನು ಸದಾ ಪ್ರತಿಷ್ಠಾಪಿಸಿರುತ್ತಾನೆ. ಅದರಿಂದಾಗಿ ಆತನು ವಕ್ರವಾದ, ಬಾಗಿರುವ ದೃಷ್ಟಿಕೋನಗಳನ್ನು ನೇರವಾಗಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಿಲ್ಗಾರನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಿಲ್ಗಾರನು ಹೇಗೆ ಗುರಿಯನ್ನು ಸಾಧಿಸಲು ಅಭ್ಯಸಿಸುವನೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಎಲ್ಲಿಯವರೆಗೆ ದೇಹವಿರುವುದು, ಅಲ್ಲಿಯವರೆಗೆ ಅಭ್ಯಸಿಸುತ್ತಾನೆ ಮತ್ತು ಆತನು ಹೇಗೆ ಅಭ್ಯಸಿಸುತ್ತಾನೆ? ಆತನು ಅನಿತ್ಯತೆಯನ್ನು ಅಭ್ಯಸಿಸುತ್ತಾನೆ, ದುಃಖದ ಅರಿವನ್ನು ಅಭ್ಯಸಿಸುತ್ತಾನೆ, ಅನಾತ್ಮದ ಅರಿವನ್ನು ಅಭ್ಯಸಿಸುತ್ತಾನೆ. ದುಃಖ ಹೇಗೆಂದರೆ ರೋಗಗಳ ನೋವಿನ ಬಗ್ಗೆ ಅರಿಯುತ್ತಾನೆ, ಪರವಾಲಂಬನೆಯ ದುಃಖ, ಪ್ರಾಕೃತಿಕ ವಿಪತ್ತುಗಳು, ಅಪಾಯಗಳು, ಭಯ, ಜೀವನದ ಅನಿಶ್ಚಿತತೆ, ಬಾಧ್ಯತೆಯ ಭಂಗ, ದೃಢತೆಯ ಕೊರತೆ, ಜೀವಿಯೇ ಕ್ಷೇಮವಿಲ್ಲದಿರುವಿಕೆ, ರಕ್ಷಣೆಯಿಲ್ಲದಿರುವಿಕೆ, ಭರವಸೆಯಿಲ್ಲದಿರುವಿಕೆ, ವ್ಯರ್ಥ, ಶೂನ್ಯ, ಅಪಾಯ ಮತ್ತು ಅಸ್ಥಿರತೆ ಈ ದೇಹವು ನೋವಿಗೆ, ಶಿಕ್ಷೆಗೆ, ಅಶುಚಿಗೆ, ವಾಸಸ್ಥಾನವಾಗಿದೆ. ಅಸಂಬದ್ಧ ಕೂಡಿಕೆಯಾಗಿದೆ, ಬೆರಕೆಯಾಗಿದೆ. ಜೀವಿಯ ಆಹಾರವು ಸಹಾ ಅಶುದ್ಧವೇ ಆಗಿದೆ. ಜೀವಿಗೆ ಸ್ವಾಭಾವಿಕ ಹೊಣೆಗಾರಿಕೆಗಳಾದ ಜನ್ಮ, ಅನಾರೋಗ್ಯ, ಮುದಿತನ, ಮೃತ್ಯು, ಶೋಕ, ಪ್ರಲಾಪ, ವಿಷಾಧ ಮತ್ತು ಆತನಲ್ಲಿ ತೀವ್ರ ಬಯಕೆಗಳು ಸದಾ ಇರುತ್ತವೆ, ಇಲ್ಲದೆ ಇರುವುದಿಲ್ಲ. ಈ ಚಿಂತನೆಯಿಂದ ಕಾಯಾನುಪಸ್ಸನ ಅಭ್ಯಾಸದಿಂದ ಆತನು ಪ್ರವೀಣನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಿಲ್ಗಾರನಲ್ಲಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಿಲ್ಗಾರನು ಬೇಗ ಮತ್ತು ನಿಧಾನವಾಗಿ ಅಭ್ಯಾಸಿಸುವನೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಧ್ಯಾನವನ್ನು ಬೇಗ ಮತ್ತು ನಿಧಾನವಾಗಿ ಅಭ್ಯಸಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಬಿಲ್ಗಾರನ ನಾಲ್ಕನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಧಮ್ಮಸೇನಾನಿ ಸಾರಿಪುತ್ತ ಥೇರರು ಹೀಗೆ ನುಡಿದಿದ್ದಾರೆ:
ಬೇಗ ಮತ್ತು ನಿಧಾನವಾಗಿ ಬಿಲ್ಗಾರನು ಅಭ್ಯಸಿಸುತ್ತಾನೆ. ಈ ರೀತಿಯ ಅಲಕ್ಷಾತೀತ ಕಲೆಯಿಂದ ಕೌಶಲ್ಯದಿಂದಾಗಿ ಆತನು ಬಿರುದು ಬಾವಲಿ ಭತ್ಯೆಗಳನ್ನು ಪಡೆಯುವನು. ಅದೇರೀತಿಯಲ್ಲಿ ಬುದ್ಧಪುತ್ರರು ಸಹಾ ತಮ್ಮ ಕಲೆಯಾದ ಧ್ಯಾನವನ್ನು ಅಭ್ಯಸಿಸುವರು, ಅವರು ಸಹಾ ಅಲಕ್ಷವನ್ನು ಪಡದೆ, ಕಾಯಾನುಪಸ್ಸನಾವನ್ನು ಅಭ್ಯಾಸ ಮಾಡುವರು. ಅರಹಂತ ಫಲವನ್ನು ಪಡೆಯುವರು.
(ಇಲ್ಲಿಗೆ ಉಪಮೆಯ ವರ್ಗವು ಮುಗಿಯಿತು)

ಇಲ್ಲಿಗೆ 262 ಪ್ರಶ್ನೆಗಳನ್ನು ಮಿಲಿಂದನು ಕೇಳಿದ್ದನು. ಅದು ಆರು ಭಾಗಗಳಾಗಿ 23 ವರ್ಗಗಳಾಗಿವೆ ಮತ್ತು ನೀಡಲಾಗದ 42 ಪ್ರಶ್ನೆಗಳು ಇವೆ. ಎಲ್ಲವನ್ನು ತೆಗೆದುಕೊಂಡಾಗ 304 ಮಿಲಿಂದ ಪ್ರಶ್ನೆಗಳಾಗುತ್ತವೆ (ನೀಡಲಾಗದ 42 ಮೂಲ ಪಾಳಿಯಲ್ಲಾಗಲಿ, ಆಂಗ್ಲ ಭಾಷೆಯಲ್ಲಾಗಲಿ ದೊರೆಯಲಿಲ್ಲ, ಅದಕ್ಕಾಗಿ ಅನುವಾದಕ ವಿಷಾಧಿಸುತ್ತಾನೆ).

                                               ನಿರ್ಗಮನ

ಈ ರೀತಿಯಾಗಿ ಜಟಿಲ ಪ್ರಶ್ನೆಗಳಿಗೆ ಅತ್ಯಂತ ಸಮಂಜಸವಾಗಿ ಉತ್ತರಿಸಿದಾಗ ಚಚರ್ೆಯ ಅಂತ್ಯಕಾಲದಲ್ಲಿ ಮಹಾಪೃಥ್ವಿಯು 84000 ಯೋಜನಗಳ ವಿಸ್ತಾರ ಭೂಮಿಯು ಆರುಬಾರಿ ಕಂಪಿಸಿತು, ಸಾಗರದುದ್ದಕ್ಕೂ ಕಂಪಿಸಿತು, ಮಿಂಚುಗಳು ಮಿಂಚಿದವು, ದೇವತೆಗಳು ಆಕಾಶದಿಂದ ಪುಷ್ಪಮಳೆಗೆರೆದವು, ಮಹಾಬ್ರಹ್ಮನು ಸಹಾ ಅಭಿನಂದಿಸಿದನು ಮತ್ತು ಆಗ ಬೃಹತ್ ಘರ್ಜನೆಯು ಆಯಿತು. ಮಿಂಚುಸಿಡಿಲು ಆಳವಾಗಿ ಘಜರ್ಿಸಿದವು. ಈ ಅದ್ಭುತ ಕಂಡು ರಾಜನ 500 ಮಂತ್ರಿಗಳು ಮತ್ತು ಅಂತಃಪುರದ ಸ್ತ್ರೀಯರು, ನಗರವಾಸಿಗಳು ಎಲ್ಲರೂ ನಾಗಸೇನರಿಗೆ ಕೈಜೋಡಿಸಿ ವಂದಿಸಿದರು, ನಂತರ ನಿರ್ಗಮಿಸಿದರು.
ಮಿಲಿಂದ ಮಹಾರಾಜರಿಗೆ ಆನಂದ ಉಕ್ಕಿತು. ಅವರ ಅಹಂಕಾರವು ಪೂರ್ಣವಾಗಿ ಅಡಗಿತು. ಆತನಿಗೆ ಸ್ಪಷ್ಟವಾಗಿ ಬುದ್ಧರ, ಧಮ್ಮದ ಮತ್ತು ಸಂಘದ ಮೌಲ್ಯ ತಿಳಿಯಿತು. ಆತನಲ್ಲಿ ತ್ರಿರತ್ನದ ಬಗೆಗಿನ ಎಲ್ಲಾ ಸಂಶಯಗಳು ಅಳಿಯಿತು. ಆತನು ಪರಸಿದ್ಧಾಂತಗಳ ದೃಷ್ಟಿ ಜಾಲಾದಿಂದ ಹೊರಬಂದಿದ್ದನು. ಆತನು ತನ್ನ ಹಠವನ್ನು ತ್ಯಜಿಸಿದನು ಮತ್ತು ಥೇರರ ಅತ್ಯುನ್ನತ ಗುಣಗಳಿಗೆ ಅಪಾರ ತೃಪ್ತಿ ಹೊಂದಿದನು. ಅವರ ಶುದ್ಧ ವರ್ತನೆಗಳಿಂದಾಗಿ ಆತನ ಶ್ರದ್ಧೆಯು ಹಿಗ್ಗಿತು ಮತ್ತು ಆತನು ಬಯಕೆಗಳಿಂದ, ಅಹಂಕಾರದಿಂದ ಬಿಡುಗಡೆ ಹೊಂದಿ, ಸ್ವಶೀಲ ಒಂದೇ ಹೃದಯದಲ್ಲಿ ಉಳಿಯಿತು. ಆತನು ಹಲ್ಲುಕಿತ್ತ ಹಾವಿನಂತೆ ಆದನು. ನಂತರ ಹೀಗೆ ಹೇಳಿದನು:
ಸಾಧು ಭಂತೆ ನಾಗಸೇನ, ಯಾವ ಜಟಿಲ ಪ್ರಶ್ನೆಗಳು ಬುದ್ಧರಿಂದ ಮಾತ್ರ ಪರಿಹರಿಸಬಹುದಿತ್ತೋ, ಅವು ನಿಮ್ಮಿಂದ ಪರಿಹರಿಸಲ್ಪಟ್ಟಿತ್ತು. ಧಮ್ಮಸೇನಾನಿ ಸಾರಿಪುತ್ತರ ನಂತರ ಯಾರಾದರೂ ಜ್ಞಾನದಲ್ಲಿ ಶ್ರೇಷ್ಠರಿರುವುದಾದರೆ ಅದು ನೀವೇ ಆಗಿರುವಿರಿ. ನಿಮ್ಮಂತೆ ಬೇರಾರು ಇಲ್ಲ. ಭಂತೆ ನಾಗಸೇನ, ನನ್ನ ತಪ್ಪುಗಳನ್ನು ಕ್ಷಮಿಸಿರಿ ಮತ್ತು ನನ್ನನ್ನು ಇಂದಿನಿಂದ ಉಪಾಸಕನನ್ನಾಗಿ ಸ್ವೀಕರಿಸಿ ನೀವೇ ನನ್ನ ಗುರುಗಳು ಆಚಾರ್ಯರು ಆಗಿರುವಿರಿ. ಇಂದಿನಿಂದ ಜೀವನಪರ್ಯಂತ ಹೀಗೆ ಉಪಾಸಕನಾಗಿರುವೆನು.
ನಂತರ ರಾಜ ಮತ್ತು ಆತನ ಮಂತ್ರಿಗಳು, ಇತರ ಆಸ್ಥಾನಿಕರು ಎಲ್ಲರೂ ನಾಗಸೇನರನ್ನು ಗೌರವಿಸಿ ವಂದಿಸಲಾರಂಭಿಸಿದರು ಮತ್ತು ರಾಜನು ವಿಹಾರವನ್ನು ಕಟ್ಟಿ ಅದಕ್ಕೆ ಮಿಲಿಂದ ವಿಹಾರ ಎಂದು ನಾಮಕರಣ ಮಾಡಿ ನಾಗಸೇನರಿಗೆ ಅಪರ್ಿಸಿದನು. ನಾಗಸೇನರು ಅಪಾರ ಅರ್ಹಂತ ಸಮೂಹಕ್ಕೆ ನಾಯಕರಾಗಿದ್ದರು. ಅವರೆಲ್ಲರಿಗೂ ಆತನು ಪರಿಕರಗಳನ್ನು ಅಪರ್ಿಸಿದನು. ನಂತರ ಥೇರರವರ ಜ್ಞಾನದಿಂದ ಆನಂದಿತನಾಗಿ ಆತನು ತನ್ನ ಮಗನಿಗೆ ರಾಜ್ಯವನ್ನು ಅಪರ್ಿಸಿ, ಗೃಹಸ್ಥ ಜೀವನವನ್ನು ತ್ಯಜಿಸಿ, ಭಿಕ್ಷುವಾಗಿ ಪ್ರಜ್ಞಾದಲ್ಲಿ ಮಹತ್ತರವಾಗಿ ವೃದ್ಧಿಹೊಂದಿ ಅರಹಂತನಾದನು. ಅದರಿಂದ ಇದು ಹೇಳಲಾಗಿದೆ:
ಪಞ್ಞವು ಇಡೀ ಲೋಕಗಳಲ್ಲಿ ವೈಭವಯುತವಾಗಿದೆ ಮತ್ತು ಸದ್ಧಮ್ಮವು ಚಿರಕಾಲ ನಿಲ್ಲಲೆಂದು ಬೋಧಿಸಲಾಗುತ್ತದೆ. ಅವರು ಪಞ್ಞದಿಂದ ಸಂಶಯತೀತರಾಗುವರು. ಪ್ರಾಜ್ಞರು ಉನ್ನತ ಪ್ರಶಾಂತಸ್ಥಿತಿ ಮುಟ್ಟುವರು.
ಯಾರಲ್ಲಿ ಪ್ರಜ್ಞಾವು ದೃಢವಾಗಿ ನೆಲೆದಿರುವುದೋ ಮತ್ತು ಸ್ಮೃತಿಯು ಯೋಗ್ಯ ಗಮನಹರಿಸುವಿಕೆಯು ಇದೆಯೋ ಆತನಿಗೆ ಅವನತಿಯಿಲ್ಲ. ಯಾರು ದಾನವನ್ನು ಸ್ವೀಕರಿಸುವರೋ ಅವರು ಸರ್ವರಲ್ಲಿ ಶ್ರೇಷ್ಠರಾಗಿರುತ್ತಾರೆ. ಆದ್ದರಿಂದ ಸಮರ್ಥ ಮನುಷ್ಯರು ತಮ್ಮ ಹಿತಕ್ಕಾಗಿ ಪ್ರಾಜ್ಞರನ್ನು ಗೌರವಿಸಿ ಅವರ ಚೇತಿಯಗಳಿಗೂ ಗೌರವ ಅಪರ್ಿಸಲಿ.
(ಇಲ್ಲಿಗೆ ಮಿಲಿಂದ ಪನ್ಹಾ ಮುಗಿಯಿತು )

Milinda panha 11.6. ಮಕ್ಕಟ ವಗ್ಗೊ (ಮರ್ಕಟ ವರ್ಗ)

6. ಮಕ್ಕಟ ವಗ್ಗೊ (ಮರ್ಕಟ ವರ್ಗ)


1. ಪಂಥ ಮಕ್ಕಟ (ದಾರಿ ಜೇಡದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಜೇಡದ ಗುಣ ಯಾವುದು?(266)
ಹೇಗೆ ಓ ಮಹಾರಾಜ, ಜೇಡವು ತನ್ನ ಬಲೆಯಿಂದ ಪರದೆಯನ್ನು ರಸ್ತೆಯಲ್ಲಿ ನಿಮರ್ಿಸುವುದೋ, ಆಗ ಅದರಲ್ಲಿ ಯಾವುದೇ ಕೀಟ ಸಿಕ್ಕಿಕೊಳ್ಳಲಿ, ಅದು ಹುಳುವಾಗಲಿ, ನೊಣವಾಗಲಿ, ದುಂಬಿಯಾಗಲಿ ಅದನ್ನು ಅದು ಹಿಡಿದು ಭಕ್ಷಿಸಿಯೇ ಬಿಡುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಿಂದ ಕೂಡಿದವನಾಗಿ, ಆರು ಇಂದ್ರೀಯ ದ್ವಾರಗಳಲ್ಲಿಯೂ ಸ್ಮೃತಿ ಪ್ರತಿಷ್ಠಾಪಿಸುತ್ತಾನೆ ಮತ್ತು ಆಗ ಯಾವುದೇ ಪಾಪದ ನೊಣಗಳು ಬಂದರೆ ಅದನ್ನು ಹಿಡಿಯುತ್ತಾನೆ, ನಾಶಪಡಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಹಾದಿಜೇಡದ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಥೇರ ಅನಿರುದ್ಧರು ಹೀಗೆ ಹೇಳಿದ್ದಾರೆ:
ಚಿತ್ತವು ಆರು ದ್ವಾರಗಳಲ್ಲಿಯು ಮುಚ್ಚಿರಬೇಕು, ಆತನು ಸ್ಮೃತಿ ಸ್ಥಾಪಿಸುವವರಲ್ಲಿ ಉತ್ತಮನಾಗಿರಲಿ, ಯಾವುದೇ ಕ್ಲೇಶವು ಸಿಕ್ಕರೆ ತಕ್ಷಣ ವಿಪಸ್ಸನಾ (ಪ್ರಜ್ಞಾ)ದ ಕತ್ತಿಯಿಂದ ಹತ್ಯೆ ಮಾಡಲಿ.

2. ಧನಸ್ಸಿತದಾರಕಂಗ ಪನ್ಹೊ 

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ತಾಯಿಯ ವಕ್ಷದಲ್ಲಿರುವ ಮಗುವಿನಂತೆ ಇರುವ ಗುಣ ಯಾವುದು? (267)
ಓ ಮಹಾರಾಜ, ಹೇಗೆ ಮಗುವು ತಾಯಿಯ ವಕ್ಷದಲ್ಲಿರುವುದೋ ಅದಕ್ಕೆ ತನ್ನದೇ ಲಾಭವಿದೆ. ಅದಕ್ಕೆ ಹಾಲು ಬೇಕಾದಾಗ ಅಳುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ತನ್ನ ಒಳಿತಿಗೆ ಅಂಟಿರುತ್ತಾನೆ. ಹಾಗೆಯೇ ಎಲ್ಲಾ ಬೋಧನೆಗೆ ಅಂಟಿರುತ್ತಾನೆ. ಹೇಳುವುದಾದರೆ, ಪ್ರಶ್ನಿಸುವಿಕೆ, ಉತ್ತರಿಸುವಿಕೆ, ಶೀಲ, ಏಕಾಂತತೆ, ಗುರು ಸಾನಿಧ್ಯದಲ್ಲಿರುವುದು, ಸುಮಿತ್ರತ್ವ ಹೊಂದಿರುವುದು, ಸತ್ಯಜ್ಞಾನಾನುಸಾರ ವತರ್ಿಸುವುದು, ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆ ಮಗುವಿನ ಗುಣವಾಗಿದೆ. ಇದರ ಬಗ್ಗೆ ದೀಘನಿಕಾಯದಲ್ಲಿ ದೇವಾದಿದೇವ ಭಗವಾನರು ಮಹಾಪರಿನಿಬ್ಬಾಣ ಸುತ್ತದಲ್ಲಿ ಹೀಗೆ ಹೇಳಿದ್ದಾರೆ:
ಓ ಆನಂದ, ಉತ್ಸಾಹಿತನಾಗಿರು, ನಿನ್ನ ಒಳಿತಿಗಾಗಿ ನಿಷ್ಟನಾಗಿರು, ಪ್ರಯತ್ನಶೀಲನಾಗು, ನಿನ್ನ ಹಿತಕ್ಕೆ ಪ್ರಕಾಶಮಾನನಾಗಿರು.

3. ಚಿತ್ತಕಧರ ಕುಮ್ಮಂಗ ಪನ್ಹೊ (ನೆಲ ಆಮೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ನೆಲ ಆಮೆಯ ಒಂದು ಗುಣ ಯಾವುದು? (268)
ಹೇಗೆ ಓ ಮಹಾರಾಜ, ನೆಲ ಆಮೆಯು ನೀರಿಗೆ ಹೆದರುವುದೋ, ನೀರಿರುವ ಪ್ರದೇಶಗಳಿಂದ ದೂರವಿರುವುದೋ, ನೀರಿನಿಂದ ದೂರವಿರುವ ಅದರ ಸ್ವಭಾವವನ್ನು ಸದಾ ಪಾಲಿಸುವುದೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಸ್ಮೃತಿಹೀನತೆಗೆ ಅಲಕ್ಷಕ್ಕೆ, ಸ್ವಲ್ಪ ತಪ್ಪಿಗೂ ಭೀತಿಪಡುತ್ತಾನೆ. ಸದಾ ಸ್ಮೃತಿವಂತನಾಗಿರುತ್ತಾನೆ. ಅಲಕ್ಷದ ಅಪಾಯದ ಗ್ರಹಿಕೆಯ ವೃದ್ಧಿಯಿಂದಾಗಿ ಆತನ ಸಮಣತ್ವವು ಮಸುಕು ಆಗುವುದಿಲ್ಲ. ಬದಲಾಗಿ ನಿಬ್ಬಾಣದ ಕಡೆಗೆ ಹೋಗುತ್ತಿರುತ್ತದೆ. ಇದೇ ಓ ಮಹಾರಾಜ, ನೆಲ ಆಮೆಯು ಹೊಂದಿರುವ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಯಾವ ಭಿಕ್ಷುವು ಎಚ್ಚರಿಕೆಯಲ್ಲಿ ಆನಂದಿಸುವನೋ, ಅಲಕ್ಷದ ಅಪಾಯಕ್ಕೆ ಹೆದರುವನೋ, ಅಂತಹವನು ಉನ್ನತ ಸ್ಥಿತಿಯಿಂದ ಎಂದಿಗೂ ಬೀಳಲಾರ, ಬದಲಾಗಿ ನಿಬ್ಬಾಣದ ಸಾನಿಧ್ಯದಲ್ಲಿ ವಿಹರಿಸುವನು.

4. ಪವನಂಗ ಪನ್ಹೊ (ಪರ್ವತ ಶಿಖರದ ಪ್ರಶ್ನೆ)

ಭಂತೆ ನಾಗಸೇನ, ಪರ್ವತ ಶಿಖರದ ಯಾವ 5 ಗುಣಗಳನ್ನು ಭಿಕ್ಷು ಹೊಂದಿರಬೇಕು? (269)
ಹೇಗೆ ಓ ಮಹಾರಾಜ, ಪರ್ವತ ಶಿಖರವು ಪಾಪಿಗಳಿಗೆ ಅಡಗುದಾಣವಾಗಿದೆಯೋ ಅದೇರೀತಿ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿರುತ್ತಾನೆ. ಆತನು ಪರರ ತಪ್ಪುಗಳು, ಪಾಪಗಳು, ರಹಸ್ಯಗಳನ್ನು ತನ್ನಲ್ಲೇ ಅಡಗಿಸಿಟ್ಟುಕೊಂಡಿರುತ್ತಾನೆ, ಅದನ್ನು ಬಹಿರಂಗಪಡಿಸುವುದಿಲ್ಲ. ಇದೇ ಓ ಮಹಾರಾಜ, ಪರ್ವತಶಿಖರದ ಗುಣವನ್ನು ಭಿಕ್ಷು ಹೊಂದಿರುತ್ತಾನೆ.
ಮತ್ತೆ ಓ ಮಹಾರಾಜ, ಪರ್ವತ ಶಿಖರವು ಜನರಿಂದ ಶೂನ್ಯವಾಗಿರುವುದೋ, ಹಾಗೆಯೇ ಭಿಕ್ಷುವು ಸಹಾ ಪ್ರಯತ್ನಪರನಾಗಿ, ಆಸೆಯಿಂದ, ಕೋಪದಿಂದ, ಮೂರ್ಖತ್ವದಿಂದ, ಅಹಂಕಾರದಿಂದ, ದೃಷ್ಟಿಜಾಲದಿಂದ, ಸರ್ವಕ್ಲೇಶಗಳಿಂದ ಶೂನ್ಯನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪರ್ವತಶಿಖರದ ದ್ವಿತೀಯ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ಪರ್ವತಶಿಖರವು ಏಕಾಂತ ಸ್ಥಳವಾಗಿದೆಯೋ, ಜನಜಂಗುಳಿಯಿಂದ ರಹಿತವಾಗಿದೆಯೋ ಅದೇರೀತಿ, ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪರಿಶ್ರಮದಿಂದ ಕೂಡಿ, ಏಕಾಂತತೆಯಲ್ಲಿ ನೆಲೆಸುತ್ತಾನೆ. ಪಾಪಗಳಿಂದ ಅನರ್ಹ ಗುಣಗಳಿಂದ ಕೂಡಿರುವುದಿಲ್ಲ.  ಉದಾತ್ತರಲ್ಲದವರ ಜೊತೆಯಲ್ಲಿ ಸೇರುವುದಿಲ್ಲ. ಇದೇ ಓ ಮಹಾರಾಜ, ಪರ್ವತ ಶಿಖರದ ತೃತೀಯ ಗುಣ. ಇದನ್ನು ಭಿಕ್ಷುವು ಹೊಂದಿರುತ್ತಾನೆ.
ಮತ್ತೆ ಓ ಮಹಾರಾಜ, ಹೇಗೆ ಪರ್ವತಶಿಖರವು ಸ್ವಚ್ಛವಾಗಿ, ಪರಿಶುದ್ಧವಾಗಿದೆಯೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲದಿಂದ ಕೂಡಿದ್ದು, ಪರಿಶುದ್ಧತೆಯಿಂದ, ಸುಖದಿಂದ, ವಿಕರ್ಷಣೆಯಿಂದ ಸುಶೀಲತೆಯಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಿರುವ ಪರ್ವತದ ಶಿಖರದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪರ್ವತದ ಶಿಖರವು ಉದಾತ್ತರಿಗೆ ಆಶ್ರಯ ತಾಣವೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ಆರ್ಯಜನರ ಸೇವನೆ ಮಾಡುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಪರ್ವತದ ಐದನೆಯ ಗುಣವಾಗಿದೆ.  ಇದರ ಬಗ್ಗೆ ಓ ಮಹಾರಾಜ, ದೇವಾದಿದೇವರಾದ ಭಗವಾನರು ಹೀಗೆ ಸಂಯುಕ್ತನಿಕಾಯದಲ್ಲಿ ಹೇಳಿದ್ದಾರೆ:
ಪರ್ವತ ಶಿಖರದಲ್ಲಿರುವ ಆರ್ಯರ (ಉದಾತ್ತದ) ರೀತಿ, ಪರ್ವತ ಶಿಖರದಲ್ಲಿರುವ ಏಕಾಂತವಾಸಿಗಳ ರೀತಿ, ಯಾರು ಅರಹತ್ವದ ಕಡೆ ಗಂಭೀರವಾಗಿ ಬಾಗಿರುವರೋ, ಯಾರ ಚಿತ್ತವು ಉನ್ನತವಾದ ಅಗ್ರಸ್ಥಿತಿಯಲ್ಲಿದೆಯೋ ಅಂತಹ ಉತ್ಸಾಹಿ, ಪ್ರಾಜ್ಞಾ ಪಂಡಿತರ ಸಹವಾಸದಲ್ಲಿರಲಿ.


5. ವೃಕ್ಷ ಪ್ರಶ್ನೆ (ರುಕ್ಖಂಗ ಪನ್ಹೊ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ವೃಕ್ಷದ 5 ಗುಣಗಳಾವುವು?(270)
ಓ ಮಹಾರಾಜ, ಹೇಗೆ ವೃಕ್ಷವು ಹೂ ಹಣ್ಣುಗಳನ್ನು ನೀಡುವುದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ವಿಮುಕ್ತಿಯ ಪುಷ್ಪಗಳನ್ನು ಮತ್ತು ಸಮಣತ್ವದ ಫಲವನ್ನು ಹೊಂದಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವೃಕ್ಷದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ವೃಕ್ಷಗಳು ತಮ್ಮ ಕೆಳಗೆ ಇರುವವರ ಮೇಲೆ ಛಾಯೆ ನೀಡುವುದೋ ಅದೇರೀತಿ ಧ್ಯಾನಶೀಲ ಜಾಗರೂಕ ಭಿಕ್ಷುವು ತಮ್ಮ ಸಾನಿಧ್ಯದಲ್ಲಿರುವವರ ಧಾಮರ್ಿಕ ಅವಶ್ಯಕತೆಗಳನ್ನು, ಅರ್ಥವನ್ನು ದಯೆಯಿಂದ ನೀಡುವವನು ಆಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವೃಕ್ಷದ ದ್ವಿತೀಯ ಗುಣವಾಗಿದೆ.
ಓ ಮಹಾರಾಜ, ಹೇಗೆ ವೃಕ್ಷವು ತನ್ನ ನೆರಳನ್ನು ಎಲ್ಲರ ಮೇಲೆ ನಿಷ್ಪಕ್ಷಪಾತದಿಂದ ನೀಡುವುದೋ ಅದೇರೀತಿ ಧ್ಯಾನಶೀಲ ಭಿಕ್ಷುವು ಯಾರ ಮೇಲೂ ಭೇದಭಾವವನ್ನು ತೋರುವುದಿಲ್ಲ. ಆತನು ಸಮಾನರೀತಿಯ ಮೈತ್ರಿಯನ್ನು ತನ್ನನ್ನು ದೋಚುವವರ ಅಥವಾ ಹಿಂಸಿಸುವವರ ಅಥವಾ ದ್ವೇಷಿಸುವವರ ಮೇಲೂ ಸಹಾ ತನ್ನ ಬಾಂಧವರಂತೆ ಮೈತ್ರಿ ತೋರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವೃಕ್ಷದ ತೃತೀಯ ಗುಣವಾಗಿದೆ. ಇದರ ಬಗ್ಗೆ ಧಮ್ಮಸೇನಾನಿ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ವಧಿಸಲು ಪ್ರಯತ್ನಿಸಿದ ದೇವದತ್ತನ ಮೇಲೆ, ಚೋರ ಅಂಗುಲಿಮಾಲನ ಮೇಲೆ, ಧನಪಾಲ (ನಾಲಾಗಿರಿ) ಆನೆಯ ಮೇಲೆ, ಪುತ್ರ ರಾಹುಲನ ಮೇಲೆ ಹೀಗೆ ಸರ್ವರ ಮೇಲೂ ಶ್ರೇಷ್ಠ ಮುನಿಯು (ಬುದ್ಧರು) ಸಮಾನವಾದ ಮೈತ್ರಿಯನ್ನು ತೋರಿದ್ದರು.

6. ಮೇಘಂಗ ಪನ್ಹೊ (ಮಳೆಯ ಮೋಡದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮಳೆಯ 5 ಗುಣಗಳಾವುವು?(271)
ಓ ಮಹಾರಾಜ, ಹೇಗೆ ಮಳೆಯು ಯಾವುದೇ ಉತ್ಪನ್ನವಾಗಿರುವ ಧೂಳನ್ನು ಶಾಂತಗೊಳಿಸುತ್ತದೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಯತ್ನದಲ್ಲಿ ಜಾಗರೂಕನಾಗಿ, ಉತ್ಪನ್ನವಾಗುವ ಕ್ಲೇಷಗಳ ಧೂಳನ್ನು ಶಾಂತಗೊಳಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಳೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಳೆಯು ಭೂಮಿಯಲ್ಲಿನ ತಾಪವನ್ನು ತಂಪುಗೊಳಿಸುವುದೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ತನ್ನ ಮೆತ್ತ ಧ್ಯಾನದಿಂದಾಗಿ ಸರ್ವಲೋಕ ದೇವತೆಗಳನ್ನು ಮತ್ತು ಮಾನವರನ್ನು ಸಂತೈಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಮಳೆಯು ಎಲ್ಲಾ ವಿಧವಾದ ಸಸ್ಯಗಳು ಬೆಳೆಯುವಂತೆ ಮಾಡುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಯತ್ನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಸರ್ವಜೀವಿಗಳಲ್ಲೂ ಶ್ರದ್ಧೆಯು ಉಂಟಾಗುವಂತೆ ಮಾಡುತ್ತಾನೆ ಮತ್ತು ಆ ಶ್ರದ್ಧೆಯು 3 ಪ್ರಾಪ್ತಿಗಳು ಆಗುವಂತೆ ಮಾಡುತ್ತಾನೆ ಮತ್ತು ಕೆಳಪ್ರಾಪ್ತಿಗಳೆಂದರೂ ಸಹಾ ಸುಗತಿಯಲ್ಲಿ ದೇವತೆಗಳಾಗಿಯು ಮತ್ತು ಪೃಥ್ವಿಯಲ್ಲಿ ಮಾನವರಾಗಿಯೂ ಹುಟ್ಟುತ್ತಾರೆ. ಆದರೆ ಪ್ರಾಪ್ತಿಗಳಲ್ಲಿ ಉಚ್ಚವಾದುದೆಂದರೆ ಅರಹತ್ವವಾಗಿದೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಮಳೆಯ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಳೆಯ ಮೋಡವು ತಾಪಕಾಲದಲ್ಲಿ ಮೇಲೇಳುತ್ತದೋ ಹಾಗು ಹುಲ್ಲಿಗೆ, ಔಷಧಿಯ ಗಿಡಮೂಲಿಕೆಗಳಿಗೆ, ಗಿಡ-ಮರಗಳಿಗೆ ರಕ್ಷಣೆ ಕೊಡುವಂತೆ ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಯೋಗ್ಯವಾದ ಜ್ಞಾನೋಚಿತ ಗಮನಹರಿಸುವಿಕೆಯಿಂದ ಸಮಣ ಧಮ್ಮವನ್ನು ರಕ್ಷಿಸುತ್ತಾನೆ. ಯೊಗ್ಯವಾದ ಜ್ಞಾನೋಚಿತ ಗಮನಹರಿಸುವಿಕೆಯೇ ಕುಶಲಧಮ್ಮದ ಮೂಲವಾಗಿದೆ. ಇದೇ ಮಹಾರಾಜ, ಭಿಕ್ಷವು ಹೊಂದಬೇಕಾದ ಮಳೆಯ ಚತುರ್ಥ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಳೆಯು ಸುರಿದು, ನದಿಗಳು, ಕೆರೆಗಳು, ಸರೋವರಗಳು, ಗವಿಗಳು, ಕಣಿವೆಗಳು, ಕೊಳಗಳು, ಬಿರುಕುಗಳು, ರಂಧ್ರಗಳು, ಬಾವಿಗಳು ನೀರಿನಿಂದ ಕೂಡಿರುತ್ತವೋ ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ, ಆಗಮ ಪರಿಪತ್ತಿಯಾದ ಧಮ್ಮದ ಮಳೆಯು ಸುರಿದು ಸಂಪ್ರದಾಯದಿಂದ ಹರಿದುಬರುತ್ತದೆ ಮತ್ತು ಹಾಗೆಯೇ ಯಾರು ಬೋಧನೆಯಲ್ಲಿ ಆಸಕ್ತರೋ ಅವರಿಗೆ ಪೂರ್ಣತೃಪ್ತಿ ನೀಡುತ್ತದೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಳೆಯ ಐದನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಧಮ್ಮ ಸೇನಾಪತಿಯಾದ ಸಾರಿಪುತ್ತರು ಹೀಗೆ ಹೇಳಿದ್ದಾರೆ:
ಮಹಾ ಮುನಿಯಾದ ಬುದ್ಧರಿಗೆ ಬೋಧಿ ಪಡೆಯುವಂತಹ ಜನಗಳು ಸಹಸ್ರ ಸಹಸ್ರ ಯೋಜನೆಗಳ, ದೂರವಿದ್ದರೂ ಸಹಾ ಕಾಣಿಸುತ್ತಾರೆ. ಕ್ಷಣದಲ್ಲಿ ಅಲ್ಲಿಗೆ ಹೋಗಿ ಧಮ್ಮವನ್ನು ಬೋಧಿಸುವರು.

7. ಮಣಿರತನಂಗ ಪನ್ಹೊ (ದಿವ್ಯವಾದ ಮಣಿರತ್ನದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮಣಿರತ್ನದ 3 ಗುಣ
ಗಳಾವುವು? (272)
ಓ ಮಹಾರಾಜ, ಹೇಗೆ ಮಣಿರತ್ನವು ಸಂಪೂರ್ಣವಾಗಿ ಪರಿಶುದ್ಧವೋ ಅದೇರೀತಿಯಾಗಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ, ಪರಿಶುದ್ಧವಾದ ಜೀವನದಿಂದ ಆತನು ಕೂಡಿರುತ್ತಾನೆ. ಇದೆ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಣಿರತ್ನದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಮಣಿರತ್ನವು ಯಾವುದೇ ವಸ್ತುವಿನೊಂದಿಗೆ, ಯಾವುದೇ ಸಂಯುಕ್ತದೊಂದಿಗೆ ಬೆರೆಯಲಾರದೋ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಪಾಪಿಗಳೊಂದಿಗೆ ಬೆರೆಯುವುದಿಲ್ಲ, ಸ್ನೇಹ ಮಾಡುವುದಿಲ್ಲ. ಇದೇ ಓ ಮಹಾರಾಜ ಭಿಕ್ಷು ಹೊಂದಬೇಕಾದ ಮಣಿರತ್ನದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮಣಿರತ್ನವು ಅತ್ಯಮೂಲ್ಯವಾದ ರತ್ನಗಳೊಂದಿಗೆ ಬೆರೆಯುವುದೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ ಶ್ರೇಷ್ಠರೊಂದಿಗೆ ಬೆರೆಯುತ್ತಾನೆ. ಅಂದರೆ ಸೋತಪನ್ನ, ಸಕದಾಗಾಮಿ, ಅನಾಗಾಮಿ, ಅರಹಂತ, ತ್ರಿವಿದ್ಯೆ ಪಡೆದವರು, ಆರು ಅಭಿಜ್ಞಾ ಪಡೆದವರು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮಣಿರತ್ನದ ತೃತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಸುತ್ತ ನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಪರಿಶುದ್ಧರೊಂದಿಗೆ ಪರಿಶುದ್ಧರು ಬೆರೆಯಲಿ, ಸದಾ ಅನುಸ್ಮೃತಿಯಲ್ಲಿ ದೃಢನಾಗಿರಲಿ. ಹೀಗೆ ಸೌಹಾರ್ದತೆಯಿಂದ ಪ್ರಾಜ್ಞರು ವಾಸಿಸಿ ಎಲ್ಲಾ ದುಃಖಗಳನ್ನು ಅಂತ್ಯಗೊಳಿಸಲಿ.

8. ಮಾಗವಿಕಂಗ ಪನ್ಹೊ (ಬೇಟೆಗಾರನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬೇಟೆಗಾರನ ನಾಲ್ಕು ಗುಣಗಳಾವುವು? (273)
ಓ ಮಹಾರಾಜ, ಹೇಗೆ ಬೇಟೆಗಾರನು ಧಣಿವನ್ನೇ ಮೀರಿರುತ್ತಾನೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಯತ್ನದಲ್ಲಿ ಜಾಗರೂಕನಾಗಿ ದಣಿವನ್ನೇ ಮೀರಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬೇಟೆಗಾರನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬೇಟೆಗಾರನು ತನ್ನ ಗಮನವೆಲ್ಲಾ ಜಿಂಕೆಯ ಮೇಲೆಯೇ ಕೇಂದ್ರೀಕೃತಗೊಳಿಸುವಂತೆ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ ತನ್ನ ಗಮನವೆಲ್ಲಾ ಧ್ಯಾನ ವಿಷಯದ ಮೇಲೆಯೇ ಕೇಂದ್ರೀಕೃತಗೊಳಿಸಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬೇಟೆಗಾರನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬೇಟೆಗಾರನು ತನ್ನ ಕಾರ್ಯದ ಸರಿಯಾದ ಕಾಲವನ್ನು ಅರಿತಿರುತ್ತಾನೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ ಈ ಸಮಯವು ಏಕಾಂತದ್ದು ಮತ್ತು ಈ ಸಮಯವು ತ್ಯಾಗದ್ದು ಎಂದು ಸರಿಯಾಗಿ ಅರಿತಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬೇಟೆಗಾರನು ಜಿಂಕೆಯನ್ನು ಕಂಡ ಕ್ಷಣದಲ್ಲಿ ನಾನು ಅದನ್ನು ಖಂಡಿತ ಪಡೆಯುವೆ ಎಂದು ಆನಂದಪಡುತ್ತಾನೋ, ಹಾಗೆಯೇ ಧ್ಯಾನಶೀಲನಾದ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಧ್ಯಾನ ವಿಷಯ ಕಂಡ ಕ್ಷಣದಲ್ಲಿ ಅಥವಾ ಕೇಳಿದ ಕ್ಷಣದಲ್ಲಿ ಆನಂದಭರಿತನಾಗಿ ನಾನು ಹುಡುಕುತ್ತಿದ್ದ ಧ್ಯಾನ ವಿಷಯವು ಇಂದು ಹಿಡಿದೆನು. ಇದೇ ಓ ಮಹಾರಜ ಭಿಕ್ಷುವು ಹೊಂದಬೇಕಾದ ಚತುರ್ಥ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಥೇರ ಮೋಘರಾಜರು ಹೀಗೆ ಹೇಳಿದ್ದಾರೆ:
ನಿಬ್ಬಾಣದ ಕಡೆ ಬಾಗಿರುವ ಭಿಕ್ಷುವಿನ ಮನಸ್ಸು ಧ್ಯಾನದ ವಿಷಯ ಪಡೆದಾಗ, ಆನಂದ ಭರವಸೆಗಳಿಂದ ಕೂಡಿ ನಾನು ಈ ಪರಮೋಚ್ಛ ಗುರಿಯನ್ನು ಪಡೆವೆನು.

9. ಬಾಳಿಸಿಕಂಗ ಪನ್ಹೊ (ಮೀನುಗಾರ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷು ಹೊಂದಿರುವ ಮೀನುನಾರನ 2 ಗುಣಗಳಾವುವು?(274)
ಹೇಗೆ ಓ ಮಹಾರಾಜ, ಮೀನುಗಾರನು ತನ್ನ ಗಾಳದಿಂದ ಮೀನುಗಳನ್ನು ಹಿಡಿಯುತ್ತಾನೋ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಜಾಗರೂಕನಾಗಿ ತನ್ನ ಜ್ಞಾನದಿಂದ ವ್ಯೂಹರಚಿಸಿ, ಪರಮೋಚ್ಛ ಸಮಣತ್ವದ ಫಲವಾದ ಅರಹಂತತ್ವವನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮೀನುಗಾರನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಮೀನುಗಾರನು, ಅಲ್ಪವನ್ನು ತ್ಯಾಗಮಾಡಿ, ಮಹತ್ತರವಾದ ಲಾಭವನ್ನು ಪಡೆಯುತ್ತಾನೊ, ಅದೇರೀತಿ ಭಿಕ್ಷುವು ಧ್ಯಾನಶೀಲನಾಗಿ, ಯತ್ನದಲ್ಲಿ ಜಾಗರೂಕನಾಗಿ, ಅಲ್ಪವಾದ ಪ್ರಾಪಂಚಿಕ ವಸ್ತು ವಿಷಯಗಳನ್ನೆಲ್ಲಾ ತ್ಯಾಗಮಾಡಿ, ಆ ತ್ಯಾಗದಿಂದಾಗಿ ಮಹತ್ತರವಾದ ಸಮಣತ್ವದ ಫಲಗಳನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಮೀನುಗಾರನ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ಓ ರಾಜ, ಥೇರ ರಾಹುಲರು ಹೀಗೆ ಹೇಳಿದ್ದಾರೆ:
ಶೂನ್ಯದ ನಿಮಿತ್ತ (ಚಿಹ್ನೆ)ದಿಂದ ಹಾಗು ಆಸೆರಹಿತದ ನಿಮಿತ್ತದಿಂದ, ವಿಮೋಕ್ಷ ಪಡೆಯುವರು ಹಾಗೆಯೇ ನಾಲ್ಕು ಫಲಗಳನ್ನು ಪಡೆದು ಆರು ಅಭಿಜ್ಞಾಗಳನ್ನು ಸಾಧಿಸುವರು. ಇವುಗಳನ್ನೆಲ್ಲಾ ಲೋಕದಲ್ಲೇ ಪಡೆಯುವರು.

10. ತಚ್ಛಕಂಗ ಪನ್ಹೊ (ಬಡಗಿಗಾರ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬಡಗಿಯವನ 2 ಗುಣ
ಗಳಾವುವು? (275)
ಓ ಮಹಾರಾಜ, ಹೇಗೆ ಬಡಗಿಯವನು ಕೊಳೆತ ಮರದ ತುಂಡನ್ನು ಬಿಟ್ಟು ಘನವಾದ ಮರದ ತುಂಡನ್ನು ಆರಿಸುವಂತೆ, ವ್ಯರ್ಥವಾದ ಭಾಗವನ್ನು ಕತ್ತರಿಸಿ ಬಿಸಾಡುವಂತೆ, ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ, ಸತ್ಯದ ಆಧಾರದಲ್ಲೇ ನಿಲ್ಲುತ್ತಾನೆ. ಜ್ಞಾನದ ಗರಗಸದ ಶ್ರದ್ಧೆಯ ಹಿಡಿಯನ್ನು ಹಿಡಿದು, ಕ್ಲೇಶಗಳನ್ನು ಕತ್ತರಿಸಿಹಾಕುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಡಗಿಯವನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಬಡಗಿಯವನು ಮೃದುವಾದ ಭಾಗಗಳನ್ನು ತೊರೆದು ಕಠಿಣವಾದ ಜಾಗವನ್ನು ಆರಿಸುವಂತೆ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನದಲ್ಲಿ ಜಾಗರೂಕನಾಗಿ ಮಿಥ್ಯಾದೃಷ್ಟಿಗಳ ಪಥವನ್ನು ತೊರೆಯುತ್ತಾನೆ. ಅವೆಂದರೆ ಶಾಶ್ವತವಾದ, ಉಚ್ಛೆದವಾದ (ನಾಶವಾಗುತ್ತದೆ ಎಂಬ ವಾದ) ಶರೀರ ಮತ್ತು ಜೀವ ಎರಡೂ ಒಂದೇ, ಶರೀರ ಮತ್ತು ಜೀವ ಇವೆರಡು ಅನ್ಯ, ತದುತ್ತಮ ಅನ್ಯದುತ್ತಮ (ಎಲ್ಲರ ಬೋಧನೆ ಉತ್ತಮ) ಅಕತಮ ಪಬ್ಬ (ಕರ್ಮದಿಂದ ಪ್ರಯೋಜನವಿಲ್ಲ), ಅಪುರಿಸಕಾರ (ಪುರುಷನ ಕ್ರಿಯೆಯಿಂದ ಲಾಭವಿಲ್ಲ), ಅಬ್ರಹ್ಮಚಾರಿಯವಾಸಂ (ಬ್ರಹ್ಮಚರ್ಯೆಯಿಂದ ಲಾಭವಿಲ್ಲ), ಸತ್ತಾವಿನಾಸಂ (ಜೀವಿಯು ನಾಶವಾಗುತ್ತಾನೆ) ನವಸತ್ತಪಾತುಭಾವಂ (ಜೀವಿ ಸತ್ತಾಗ 9 ಬಗೆಯ ಜೀವಿಗಳು ಉದಯಿಸುತ್ತದೆ). ಸಂಖಾರಸಸ್ಸತ ಭಾವಂ (ಸಂಖಾರಗಳು ಶಾಶ್ವತ) ಯೋ ಕರೋತಿ, ಕೊ ಪಟಿಸಂವೇದಿತಿ (ಕ್ರಿಯೆ ಮಾಡುವವನು ಹಾಗು ಫಲ ಅನುಭವಿಸುವವನು ಒಂದೇ). ಅನ್ಯೂಕರೂತಿ, ಅನ್ಯೂ ಪಟಿಸಂವೆದೆತಿ (ಕ್ರಿಯೆ ಮಾಡುವವನು ಬೇರೆ, ಫಲ ಅನುಭವಿಸುವವನು ಬೇರೆ) ಮತ್ತು ಇತರೆ ಅಂತಹ ಕರ್ಮಫಲದರ್ಶನಗಳು ಮತ್ತು ಕ್ರಿಯಫಲ ದೃಷ್ಟಿಗಳನ್ನು ತೊರೆಯುತ್ತಾನೆ. ಇವೆಲ್ಲಾ ಸಿದ್ಧಾಂತಗಳು ಪಾಖಂಡಿತ್ಯವನ್ನು ಹೊಂದಿವೆ. ಇವೆಲ್ಲಾ ಮಿಥ್ಯಾದೃಷ್ಟಿಗಳನ್ನು ತ್ಯಜಿಸುತ್ತಾನೆ. ಈ ಎಲ್ಲಾ ಸಂಖಾರಗಳಿಂದ ಅತೀತವಾಗಿ ಪರಮಶೂನ್ಯತೆ ಪಡೆಯುತ್ತಾನೆ. ಅಲ್ಲಿ ಯಾವ ವ್ಯಕ್ತಿ ಭಾವವು ಇರುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಡಗಿಯವನ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವರಾದ ಭಗವಾನರು ಸುತ್ತನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಈ ಮಲಗಳಿಂದ ಮುಕ್ತರಾಗಿ, ಈ ಕಸವನ್ನೆಲ್ಲಾ ನಿಮ್ಮಿಂದ ದೂರವಿಡಿ, ಹುರಳಿಲ್ಲದ್ದನ್ನು ಗಾಳಿಗೆ ತೂರಿ, ಯಾರು ಈ ಎಲ್ಲಾ ಮಿಥ್ಯಾದೃಷ್ಟಿಗಳನ್ನು ಹಿಡಿದಿರುವರೋ ಅವರು ನಿಜ ಸಮಣರಲ್ಲ. ಪಾಪಯುತ ಅಕುಶಲ ಯೋಚನೆಗಳಿಂದ ಪಾಪಜೀವನದಿಂದ ಹೊರಬನ್ನಿ, ನಿಮ್ಮನ್ನು ಯೋಗ್ಯವಾಗಿ ಗಮನಿಸುತ್ತಾ ಪರಿಶುದ್ಧರಾಗಿ, ಪರಿಶುದ್ಧರೊಡನೆ ಬೆರೆಯಿರಿ.
(ಆರನೆಯ ಮಕ್ಕಟಕ ವರ್ಗ ಮುಗಿಯಿತು )

Milinda panha 11.5. ಸಿಂಹ ವಗ್ಗೋ (ಸಿಂಹ ವರ್ಗ)

5. ಸಿಂಹ ವಗ್ಗೋ (ಸಿಂಹ ವರ್ಗ)


1. ಸಿಂಹಂಗ ಪನ್ಹೋ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಸಿಂಹದ 7 ಗುಣಗಳು
ಯಾವುವು? (256)
ಓ ಮಹಾರಾಜ, ಹೇಗೆ ಸಿಂಹವು ಸ್ಪಷ್ಟವೋ, ಕಲೆರಹಿತವೋ ಮತ್ತು ಪರಿಶುದ್ಧ ತಿಳಿ ಹಳದಿ ಬಣ್ಣದ್ದೋ, ಹಾಗೆಯೇ ಓ ಮಹಾರಾಜ, ಭಿಕ್ಷುವು ಸಹಾ ಧ್ಯಾನಶೀಲನೋ, ಪರಿಶ್ರಮವುಳ್ಳವನೋ ಸ್ಪಷ್ಟನು, ಕಲೆರಹಿತನು ಮತ್ತು ಚಿತ್ತದಲ್ಲಿ ಪರಿಶುದ್ಧ ಬೆಳಕಿನವನು, ಕೋಪರಹಿತನು ಮತ್ತು ಚಿಂತಾರಹಿತನಾಗಿರುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಿಂಹದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಚಲಿಸಲು ನಾಲ್ಕು ಪಂಜಗಳಿಂದ ಕೂಡಿದೆಯೋ, ವೇಗದ ನಡಿಗೆಯಿಂದ ಕೂಡಿದೆಯೋ ಅದೇರೀತಿ ಭಿಕ್ಷುವು ಸಹಾ ಧ್ಯಾನಶೀಲನಾಗಿ, ಪ್ರಯತ್ನಶೀಲನಾಗಿ, ನಾಲ್ಕು ಹಂತಗಳ ಅರಹತ್ವದಲ್ಲಿಯೇ ಚಲಿಸುತ್ತಾನೆ. ಇದೇ ಓ ಮಹಾರಾಜ, ಸಿಂಹವು ಹೊಂದಿರುವ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಸುಂದರವಾದ ಕೂದಲಿನ ಚರ್ಮವನ್ನು ಹೊಂದಿದೆಯೋ, ನೋಡಲು ಆನಂದದಾಯಕವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಿಂದ ಕೂಡಿ, ಸುಂದರವಾದ ಶೀಲವನ್ನು ಹೊಂದಿರುತ್ತಾನೆ. ನೋಡಲು ಆನಂದದಾಯಕನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಪ್ರಾಣ ಹೋಗುತ್ತಿದ್ದರೂ ಮಾನವನ ಮುಂದೆ ತಲೆಬಾಗಿಸುವುದಿಲ್ಲವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿರುತ್ತಾನೆ. ಆತನಿಗೆ ಯಾವುದೇ ಪರಿಕರಗಳು (ಆಹಾರ, ಚೀವರ, ಔಷಧ, ವಸತಿ) ಸಿಗದಿದ್ದರೂ ಆತನು ಯಾವುದೇ ಮಾನವರ ಮುಂದೆ ತಲೆಬಾಗಿಸುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಿಂಹದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ನಿತ್ಯವು ಆಹಾರ ಸೇವಿಸುವುದೋ, ಸಿಕ್ಕ ಯಾವುದೇ ಪ್ರಾಣಿಯ ಮಾಂಸವನ್ನು ಭಕ್ಷಿಸುವುದೋ, ಉತ್ತಮ ಮಾಂಸವನ್ನೇ ನಿರೀಕ್ಷಿಸುವುದಿಲ್ಲವೋ ಅದೇರೀತಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಉತ್ತಮ ಭೋಜನವನ್ನು ನೀರೀಕ್ಷಿಸದೆ, ಹಾಗೆಯೇ ಯಾವುದೇ ಮನೆಯನ್ನು ಬಿಡದೆ, ಆಹಾರದಲ್ಲಿ ಯಾವುದೇ ಆಯ್ಕೆ ಇರದೆ, ಸಿಕ್ಕಿದಂತ ಯಾವುದೇ ಆಹಾರವನ್ನು ಸೇವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಐದನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಆಹಾರವನ್ನು ಸಂಗ್ರಹಿಸುವುದಿಲ್ಲವೋ ಮತ್ತೆ ಒಮ್ಮೆ ತಿಂದಂತಹ ಬೇಟೆಯನ್ನು ಮತ್ತೆ ಸೇವಿಸುವುದಿಲ್ಲವೋ, ಅದೇರೀತಿ ಭಿಕ್ಷುವು ಪ್ರಯತ್ನಶೀಲನಾಗಿ, ಎಂದಿಗೂ ಆಹಾರವನ್ನು ಸಂಗ್ರಹಿಸುವುದಿಲ್ಲ. ಇದೇ ಭಿಕ್ಷುವು ಹೊಂದಬೇಕಾದ ಸಿಂಹದ ಆರನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಿಂಹವು ಆಹಾರ ದೊರಕದಿದ್ದರೂ ಚಿಂತಿತವಾಗುವುದಿಲ್ಲವೋ, ಸಿಕ್ಕಿದಾಗ ಅತ್ಯಾಸೆಯಿಲ್ಲದೆ ತಿನ್ನುವುದೋ ಬವಳಿಯಿಲ್ಲದೆ ತಿನ್ನುವುದೋ ಅಸಹ್ಯವಿಲ್ಲದೆ ತಿನ್ನುವುದೋ ಹಾಗೆ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲತೆಯಿಂದ ಕೂಡಿರುತ್ತಾನೆ. ಆತನಿಗೆ ಆಹಾರ ಸಿಗದಿದ್ದರೂ ಸಹಾ ಚಿಂತಿತನಾಗುವುದಿಲ್ಲ. ಗಾಬರಿ ಬೀಳುವುದಿಲ್ಲ. ಆಹಾರ ತಿನ್ನುವಾಗ, ಬಯಕೆಯಿಲ್ಲದೆ ರುಚಿಯ ಲೋಭವಿಲ್ಲದೆ ತಿನ್ನುತ್ತಾನೆ. ಹಾಗೆಯೇ ಅಸಹ್ಯತೆಯಿಲ್ಲದೆ ರುಚಿ ಲೋಭದ ಪರಿಣಾಮ ಅರಿವಿದ್ದು ತಿನ್ನುತ್ತಾನೆ. ರಾಗ-ದ್ವೇಷಗಳಿಲ್ಲದೆ ಆಹಾರ ಸೇವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಿಂಹದ ಏಳನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಸಂಯುಕ್ತ ನಿಕಾಯದಲ್ಲಿ ಥೇರ ಮಹಾಕಸ್ಸಪರವರನ್ನು ಪ್ರಶಂಸಿಸುವಾಗ ಹೀಗೆ ನುಡಿದಿದ್ದರು.
ಓ ಭಿಕ್ಷುಗಳೇ, ಈ ಕಸ್ಸಪ ಸಂತುಷ್ಟನಾಗಿರುವವನು, ತನಗೆ ದೊರೆತ ಆಹಾರದಲ್ಲೇ ತೃಪ್ತನಾಗುವಂತಹವನು. ಆತನು ಆಹಾರಕ್ಕಾಗಿ ಯಾವುದೇ ತಪ್ಪನ್ನು/ಅಪರಾಧವನ್ನು ಮಾಡುವುದಿಲ್ಲ. ಆತನಿಗೆ ಆಹಾರ ಸಿಗದಿದ್ದಾಗ ವ್ಯಥಿತನಾಗುವುದಿಲ್ಲ. ಸಿಕ್ಕಾಗ ಬಯಕೆರಹಿತನಾಗಿ ಆಹಾರ ಸೇವಿಸುತ್ತಾನೆ. ಯಾವುದೇ ಬಳಲಿಕೆಯಿಲ್ಲದೆ, ಕುಗ್ಗದೆ, ಅಪಾಯದ ಅರಿವಿದ್ದು, ಅಸಹ್ಯವಿಲ್ಲದೆ, ಆಹಾರದ ಬಗ್ಗೆ ಯೋಗ್ಯ ಗಮನಹರಿಸುವಿಕೆ ಯಿಂದಲೇ ಕೂಡಿರುತ್ತಾನೆ.

2. ಚಕ್ಕವಾಕಂಗ ಪನ್ಹೊ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಚಕ್ರವಾಕದ ಪಕ್ಷಿಯ 3 ಗುಣಗಳಾವುವು? (257)
ಓ ಮಹಾರಾಜ, ಚಕ್ರವಾಕ ಪಕ್ಷಿಯು ತನ್ನ ಸಂಗಾತಿಯನ್ನು ತನ್ನ ಪ್ರಾಣಹೋಗುವ ಸ್ಥಿತಿಯಲ್ಲಿದ್ದರೂ ತೊರೆಯುವುದಿಲ್ಲ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ ಕೂಡಿದ್ದು, ತನ್ನ ಜೀವನಪರ್ಯಂತ ಯೋಗ್ಯವಾದ, ಜ್ಞಾನೋಚಿತ ಗಮನಹರಿಸುವಿಕೆಯನ್ನು ತೊರೆಯುವುದಿಲ್ಲ. ಇದೇ ಮಹಾರಾಜ, ಭಿಕ್ಷುವು ಹೊಂದಿರುವ ಚಕ್ರವಾಕದ ಪ್ರಥಮ ಅಂಗವಾಗಿದೆ.
ಮತ್ತೆ ಓ ಮಹಾರಾಜ, ಚಕ್ರವಾಕವು ಸೇವಲ ಮತ್ತು ಪಣಕ ಎಂಬ ನೀರಿನ ಗಿಡಗಳನ್ನು ತಿಂದು ಜೀವಿಸುತ್ತವೆ. ಅದರಿಂದಲೇ ತೃಪ್ತವಾಗುತ್ತವೆ. ಅವು ಎಷ್ಟೊಂದು ತೃಪ್ತವಾಗುತ್ತವೆ ಎಂದರೆ ಅವುಗಳ ಶಕ್ತಿಯಾಗಲಿ ಅಥವಾ ಸುಂದರತೆಯಾಗಲಿ ಕಡಿಮೆಯೇ ಆಗುವುದಿಲ್ಲ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ ತನಗೆ ದೊರೆತಿದ್ದರಲ್ಲೇ ತೃಪ್ತಿ ತಾಳುತ್ತಾನೆ ಮತ್ತು ಆತನಿಗೆ ಎಷ್ಟೊಂದು ತೃಪ್ತಿಯಾಗುತ್ತದೆ ಎಂದರೆ ಆತನ ಧ್ಯಾನಬಲವಾಗಲಿ ಅಥವಾ ಪ್ರಜ್ಞೆಯಾಗಲಿ ಅಥವಾ ವಿಮುಕ್ತಿಯಾಗಲಿ ಅಥವಾ ವಿಮುಕ್ತಿಯ ಜ್ಞಾನವಾಗಲಿ ಅಥವಾ ಯಾವುದೇ ಶೀಲವಾಗಲಿ ಯಾವುದೇ ಕುಶಲ ಧಮ್ಮವಾಗಲಿ ಕ್ಷೀಣಿಸುವುದಿಲ್ಲ, ಕಡಿಮೆಯಾಗುವುದಿಲ್ಲ, ಇದೇ ಓ ಮಹಾರಾಜ, ಚಕ್ರವಾಕದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಚಕ್ರವಾಕ ಪಕ್ಷಿಯು ಯಾವುದೇ ಜೀವಿಗೂ ಹಾನಿ ಮಾಡುವುದಿಲ್ಲ. ಅದೇರೀತಿ ಧ್ಯಾನಶೀಲ ಭಿಕ್ಷುವು ದಂಡಶಸ್ತ್ರಗಳನ್ನು ತ್ಯಜಿಸಿ, ವಿನೀತನಾಗಿ, ಕರುಣೆಯಿಂದ ಲೋಕಾನುಕಂಪೆಯಿಂದ, ಸರ್ವಜೀವಿಗಳ ಮೇಲೆ ದಯೆವುಳ್ಳವನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಚಕ್ರವಾಕ ಪಕ್ಷಿಯ 3ನೆಯ ಗುಣವಾಗಿದೆ. ಇದರ ಬಗ್ಗೆ ದೇವಾಧಿದೇವ ಭಗವಾನರು ಚಕ್ರವಾಕ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಯಾರು ಕೊಲ್ಲುವುದಿಲ್ಲವೋ ಅಥವಾ ಧ್ವಂಸ ಮಾಡುವುದಿಲ್ಲವೋ ಅಥವಾ ದಬ್ಬಾಳಿಕೆ ಮಾಡುವುದಿಲ್ಲವೋ, ಪರರ ಐಶ್ವರ್ಯವನ್ನು ಕಬಳಿಸಲು ಪ್ರೇರೇಪಿಸುವುದಿಲ್ಲವೋ ಮತ್ತು ಸರ್ವಜೀವಿಗಳ ಬಗ್ಗೆ ದಯೆ, ಮೈತ್ರಿವುಳ್ಳವನೋ ಅಂತಹವನಲ್ಲಿ ಶಾಂತಿಯನ್ನು ಧಕ್ಕೆ ತರುವಂತಹ ಕೋಪವು ಆತನಲ್ಲಿರುವುದಿಲ್ಲ.

3. ಪೆಣಾಹಿಕಂಗ ಪನ್ಹೊ (ಪೆಣಾಹಿಕಾ ಪಕ್ಷಿ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಪೆಣಹಿಕಾ ಪಕ್ಷಿಯ 2 ಗುಣಗಳಾವುವು? (258)
ಓ ಮಹಾರಾಜ, ಹೇಗೆ ಪೆಣಾಹಿಕ ಪಕ್ಷಿಯು ತನ್ನ ಸಂಗಾತಿಯ ಮೇಲಿನ ಮತ್ಸರದಿಂದ ತನ್ನ ಮರಿಗಳ ಪೋಷಣೆ ಮಾಡಲು ನಿರಾಕರಿಸುವುದೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷು, ಪ್ರಯತ್ನದಿಂದ, ಕೂಡಿ, ತನ್ನಲ್ಲಿ ಯಾವುದೇ ಕ್ಲೇಷಗಳು ಉಂಟಾಗಲಿ, ಆಗ ಆತನು ಸ್ಮೃತಿಪ್ರತಿಷ್ಠಾನದಿಂದ ಸಮ್ಯಕ್ ಸಂಯಮದಿಂದ ಅದನ್ನು ದೂರೀಕರಿಸಿ, ಮನೋದ್ವಾರದಿಂದ ಕಾಯಗತಾನುಸ್ಮೃತಿಯನ್ನು ಅಭ್ಯಸಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೆಣಾಹಿಕಾ ಪಕ್ಷಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೆಣಾಹಿಕಾ ಪಕ್ಷಿ ಹಗಲಿನಲ್ಲಿ ಆಹಾರಕ್ಕಾಗಿ ಕಾಡಿನಲ್ಲಿ ಹಾರಾಡುತ್ತಿರುತ್ತದೆ. ಆದರೆ ರಾತ್ರಿಯ ವೇಳೆ ತನ್ನ ವಾಸಸ್ಥಳದಲ್ಲಿ ತನ್ನ ಮರಿಗಳನ್ನು ಕಾಪಾಡುತ್ತಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ದಶಬಂಧನಗಳಿಂದ ವಿಮುಕ್ತನಾಗಲು ತನ್ನ ಸಮಯವೆಲ್ಲಾ ಏಕಾಂತ ಸ್ಥಳಗಳಲ್ಲಿ ಧ್ಯಾನಿಸುತ್ತಾ ಕಾಲಕಳೆಯುತ್ತಾನೆ. ಅಷ್ಟಕ್ಕೆ ತೃಪ್ತನಾಗದೆ, ನಿಂದೆಯಿಂದ ಪಾರಾಗಲು ಸಂಘಕ್ಕೆ ಮರಳುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೆಣಾಹಿಕಾ ಪಕ್ಷಿಯ ದ್ವಿತೀಯ ಗುಣವಾಗಿದೆ ಮತ್ತು ಇದರ ಬಗ್ಗೆ ಬ್ರಹ್ಮ ಸಹಂಪತ್ತಿಯು ಭಗವಾನರ ಸಮ್ಮುಖದಲ್ಲಿ ಹೀಗೆ ಹೇಳಿದ್ದಾರೆ:
ಜನರಿಂದ ದೂರವಾದ ಸ್ಥಳಗಳಲ್ಲಿ ವಾಸಮಾಡಲಿ, ಅಲ್ಲಿದ್ದು ಪಾಪಬಂಧನಗಳಿಂದ ದೂರವಾಗಿ ಸ್ವತಂತ್ರನಾಗಿರಲಿ, ಆದರೆ ಯಾರು ಏಕಾಂತದಲ್ಲೂ ಶಾಂತಿಯನ್ನು ಕಾಣನೋ ಆತನು ಸಂಘದ ಜೊತೆಗೆ ಇದ್ದು, ಚಿತ್ತವನ್ನು ರಕ್ಷಿಸಿ, ಸ್ಮೃತಿಯಿಂದ ಕೂಡಿರಲಿ.

4. ಘರಕಪೋತಕಂಗ ಪನ್ಹೊ (ಮನೆಯ ಪಾರಿವಾಳದ ಬಗ್ಗೆ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮನೆ ಪಾರಿವಾಳದ ಗುಣ ಯಾವುದು? (259)
ಹೇಗೆ ಓ ಮಹಾರಾಜ, ಪಾರಿವಾಳವು ಜನರ ಮನೆಯಲ್ಲಿ ವಾಸಿಸುವಾಗ ಆ ಮನೆಯವರಿಗೆ ಸೇರಿದ ಯಾವುದೇ ವಸ್ತುಗಳಲ್ಲಿ ಆಸಕ್ತವಾಗುವುದಿಲ್ಲ, ತಟಸ್ಥವಾಗಿರುತ್ತದೆ. ಕೇವಲ ಪಕ್ಷಿಗಳಿಗೆ ಸೇರಿದ ವಸ್ತುಗಳನ್ನು ಮಾತ್ರ ಗಮನಿಸುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಪರನಾಗಿ, ಗೃಹಸ್ಥರ ಮನೆಯಲ್ಲಿ ವಾಸಿಸುವಾಗ ಎಂದಿಗೂ ಸಹಾ ಸ್ತ್ರೀಯರಲ್ಲಿ, ಪುರುಷರಲ್ಲಿ, ಹಾಸಿಗೆಯಲ್ಲಿ ಅಥವಾ ಪೀಠೋಪರಣಗಳಲ್ಲಿ, ವಸ್ತ್ರಗಳಲ್ಲಿ, ಆಭರಣಗಳಲ್ಲಿ, ಭೋಗ ವಸ್ತುಗಳಲ್ಲಿ, ಆಹಾರಗಳಲ್ಲಿ, ಇವೆಲ್ಲಾದರಲ್ಲಿ ಆಸಕ್ತಿಯನ್ನು ತಾಳುವುದಿಲ್ಲ. ಆದರೆ ಅವುಗಳೆಲ್ಲದರ ಮೇಲೆ ತಟಸ್ಥವಾಗಿದ್ದು, ಕೇವಲ ಭಿಕ್ಷು ಜೀವನದಲ್ಲಿ ಮಾತ್ರ ಆಸಕ್ತಿ ತೋರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೃಹ ಪಾರಿವಾಳದ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಚುಲ್ಲನಂದ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಗೃಹಸ್ಥರ ಮನೆಗೆ ಆಹಾರ ಪಾನಿಯಗಳಿಗಾಗಿ ಹೋಗಬೇಕಾಗುತ್ತದೆ. ಮಿತವಾಗಿ ತಿನ್ನಿ, ವಿನೀತವಾಗಿ ಸೇವಿಸಿ, ರೂಪಗಳಲ್ಲಿ ಮನವು ಹೋಗದಿರಲಿ.

5. ಉಲ್ಲೂಕಂಗ ಪನ್ಹೋ (ಗೂಬೆ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಗೂಬೆಯ ಎರಡು ಗುಣ
ಗಳಾವುವು? (260)
ಓ ಮಹಾರಾಜ, ಹೇಗೆ ಗೂಬೆಯು ತನ್ನ ಶತ್ರುವಾದ ಕಾಗೆಗಳ ಗೂಡಿಗೆ ರಾತ್ರಿ ಹೋಗಿ, ಅಲ್ಲಿ ಅಪಾರ ಕಾಗೆಗಳನ್ನು ಕೊಲ್ಲುತ್ತದೆ. ಅದೇರೀತಿ ಓ ಮಹಾರಾಜ, ಭಿಕ್ಷುವು ಸಹಾ ಧ್ಯಾನಶೀಲನಾಗಿ, ಅಜ್ಞಾನದೊಂದಿಗೆ ಶತ್ರುತ್ವವಿಟ್ಟು, ರಹಸ್ಯ ಸ್ಥಳದಲ್ಲಿ ಕುಳಿತು, ಆತನು ಅಸ್ತಿತ್ವವನ್ನೇ ಪುಡಿಮಾಡುತ್ತಾನೆ. ಅದರ ಬೇರುಗಳನ್ನೇ ಕತ್ತರಿಸಿಹಾಕುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಬೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೀಗೆ ಗೂಬೆಯು ಏಕಾಂತದಲ್ಲಿ ವಾಸಿಸುವ ಪಕ್ಷಿಯೋ, ಅದೇರೀತಿ ಧ್ಯಾನಶೀಲ ಭಿಕ್ಷುವು ಸಹಾ ಏಕಾಂತದಲ್ಲಿ ವಾಸಿಸಿ, ಪ್ರಯತ್ನಶೀಲನಾಗಿ, ಏಕಾಂತತೆಯಲ್ಲಿ ರಮಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಬೆಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಸಂಯುಕ್ತ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ಯಾವ ಭಿಕ್ಷುವು ಏಕಾಂತದಲ್ಲಿ ರಮಿಸಿ, ಸಾಧನೆ ಮಾಡುತ್ತಾನೋ, ಆತನು ಇದೇ ದುಃಖವೆಂದು ಯಥಾಭೂತವಾಗಿ ಅರಿಯುತ್ತಾನೆ. ಇದೇ ದುಃಖಕ್ಕೆ ಕಾರಣವೆಂದು ಯಥಾಭೂತವಾಗಿ ಅರಿಯುತ್ತಾನೆ. ಇದೇ ದುಃಖನಿರೋಧವೆಂದು ಯಥಾಭೂತವಾಗಿ ಅರಿಯುತ್ತಾನೆ. ಇದೇ ದುಃಖ ನಿರೋಧದ ಮಾರ್ಗವೆಂದು ಯಥಾಭೂತವಾಗಿ ಅರಿಯುತ್ತಾನೆ.

6. ಸತಪತ್ತಂಗ ಪನ್ಹೋ (ಭಾರತೀಯ ಕೊಕ್ಕರೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಭಾರತೀಯ ಕೊಕ್ಕರೆಯ ಗುಣ ಯಾವುದು? (261)
ಹೇಗೆ ಓ ಮಹಾರಾಜ, ಭಾರತೀಯ ಕೊಕ್ಕರೆಯು ಮುಂದೆ ಸಂಭವಿಸದಿರುವ ಭಾಗ್ಯವನ್ನು ಅಥವಾ ದೌಭರ್ಾಗ್ಯವನ್ನು ಕೂಗಿ ತನ್ನ ಧ್ವನಿಯಲ್ಲಿ ಹೇಳುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಪರರಿಗೆ ಯಾವ ಕರ್ಮವು ಭಯಾನಕ, ನರಕಜನಕ ಅಥವಾ ಯಾವ ಕರ್ಮ ಶುಭಕಾರಿ, ಹೇಗೆ ನಿಬ್ಬಾಣ ಪರಮಸುಖ ಕ್ಷೇಮಕಾರಿ ಎಂದೆಲ್ಲಾ ಬೋಧಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಕೊಕ್ಕರೆಯ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ಥೇರ ಪಿಂಡೋಲ ಭಾರಧ್ವಜರು ಹೀಗೆ ಹೇಳಿದ್ದಾರೆ:
ನರಕವು ಅತ್ಯಂತ ಭಯಾನಕವಾಗಿದೆ, ಹಾಗೆಯೇ ನಿಬ್ಬಾಣದಲ್ಲಿ ವಿಫುಲವಾದ ಸುಖವಿದೆ. ಹೀಗೆ ಭಿಕ್ಷುವು ಈ ಎರಡನ್ನು ಹೇಳಿ ಪರರಿಗೆ ಸ್ಪಷ್ಟೀಕರಣ ಮಾಡುತ್ತಾನೆ.

7. ಬಾವಲಿ (ವಾಗ್ಗುಲಿಂಗ ಪನ್ಹೊ) ಪ್ರಶ್ನೆ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬಾವಲಿಯು 2
ಗುಣಗಳಾವುವು? (262)
ಓ ಮಹಾರಾಜ, ಹೇಗೆ ಬಾವಲಿಯು ಯಾವಾಗಲಾದರೂ ಬಾವಲಿಯು ಆಕಸ್ಮಿಕವಾಗಿ ಜನರ ವಾಸಸ್ಥಳಕ್ಕೆ ಹೊಕ್ಕರೆ, ತಡಮಾಡದೆ, ಅಲ್ಲಿಂದ ಹಾರಿ ಹೊರ ಹೋಗಿಬಿಡುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಆಹಾರಕ್ಕಾಗಿ ನಗರ ಅಥವಾ ಹಳ್ಳಿಗೆ ಬಂದಾಗ ಆಹಾರ ಸಿಕ್ಕಿದ ನಂತರ ತಡಮಾಡದೆ ತಕ್ಷಣ ಗೃಹಸ್ಥರಿಂದ ದೂರಹೋಗಿ ಏಕಾಂತದಲ್ಲಿ ಸಾಧನೆ ಮಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬಾವಲಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ರಾಜ, ಬಾವಲಿಯು ಜನರ ಮನೆಗಳಿಗೆ ಆಗಾಗ್ಗೆ ಹೋದಾಗ ಅವರಿಗೆ ಹಾನಿ ಉಂಟುಮಾಡುವುದಿಲ್ಲ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಿಂದ ಕೂಡಿರುತ್ತಾನೆ. ಆತನು ಆಗಾಗ್ಗೆ ಗೃಹಸ್ಥರ ಮನೆಗೆ ಹೋಗುತ್ತಿರುವಾಗ, ಅವರನ್ನು ಪರಿಕರಗಳಿಗಾಗಿ ಅಥವಾ ಅವಶ್ಯಕತೆಗಳಾಗಲಿ, ಪೀಡಿಸುವುದಿಲ್ಲ, ಮಿಥ್ಯಾಜೀವನ ಮಾಡುವುದಿಲ್ಲ, ಅತಿಮಾತು ಆಡುವುದಿಲ್ಲ. ಆತನು ಅವರ ಉನ್ನತಿ ಅಥವಾ ಕಷ್ಟಗಳ ಬಗ್ಗೆ ತಟಸ್ಥನಾಗಿರುತ್ತಾನೆ. ಅವರ ವ್ಯವಹಾರಗಳನ್ನು ಅವರಿಂದ ದೂರಮಾಡುವುದಿಲ್ಲ. ಅವರ ಉನ್ನತಿ ಬಯಸುತ್ತಾನೆ, ಸರ್ವಜೀವಿಗಳ ಸುಖ, ಉನ್ನತಿ ಬಯಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ, ಬಾವಲಿಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಲಕ್ಖಣ ಸುತ್ತಂತದಲ್ಲಿ ಹೀಗೆ ಹೇಳಿದ್ದಾರೆ:
ಓಹ್, ಎಷ್ಟು ಜನರು ನಷ್ಟಕ್ಕೆ ದುಃಖಿಸಲಾರರು ಅಥವಾ ಕೊರತೆಗೆ ನರಳಲಾರರು. ಅವರು ಶ್ರದ್ಧೆಯಿಂದ ಅಥವಾ ಶೀಲದಿಂದ, ಶ್ರುತಿಯಿಂದ, ಬುದ್ಧಿಯಿಂದ, ತ್ಯಾಗದಿಂದ, ಧಮ್ಮದಿಂದ, ಬಹು ಒಳ್ಳೇತನದಿಂದ, ಧನದಿಂದ, ಧ್ಯಾನದಿಂದ, ಹೊಲಗಳಿಂದ, ಪುತ್ರರಿಂದ ಞ್ಞಾತಿಗಳಿಂದ, ಮಿತ್ರರಿಂದ, ಬಾಂಧವರಿಂದ, ಬಲದಿಂದ, ವರ್ಣದಿಂದ, ಸುಖದಿಂದ ಕೂಡಿರಲಿ, ಪರರಿಗೆ ಯಾವುದೇ ಹಾನಿಯಾಗದಿರಲಿ ಎಂದು ಅವರು ಯೋಚಿಸುವರು.

8. ಜಲೂಕ ಪನ್ಹೋ (ಜಿಗಣೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಜಿಗಣೆಯ ಗುಣವ್ಯಾವುದು?(263)
ಓ ಮಹಾರಾಜ, ಹೇಗೆ ಜಿಗಣೆಯನ್ನು ಎಲ್ಲೇ ಇರಲಿ, ಅದು ಅಲ್ಲಿ ದೃಢವಾಗಿ ಅಂಟಿಕೊಂಡು ರಕ್ತವನ್ನು ಕುಡಿಯುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ಯಾವುದೇ ಧ್ಯಾನದ ವಿಷಯವಿರಲಿ ಆತನ ಮನಸ್ಸು ಅದಕ್ಕೆ ಕೇಂದ್ರೀಕೃತವಾಗಿ ಅಂಟಿಕೊಳ್ಳುತ್ತದೆ. ಅದರ ಬಣ್ಣ, ಆಕಾರ, ಸ್ಥಿತಿ, ವಿಸ್ತಾರ, ಮಿತಿ ಸ್ವಭಾವ ಮತ್ತು ಲಕ್ಷಣಗಳೆಲ್ಲಾ ಸ್ಥಿರವಾಗಿ ಕೇಂದ್ರೀಕೃತವಾಗಿ ವಿಮುಕ್ತಿಯ ಅಮೃತ ರಸವನ್ನು ಸೇವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಜಿಗಣೆಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಅನುರುದ್ಧ ಥೇರರು ಹೀಗೆ ಹೇಳಿದ್ದಾರೆ:
ಪರಿಶುದ್ಧ ಚಿತ್ತದಿಂದ ಧ್ಯಾನವು ಸ್ಥಿರವಾಗಿ ನೆಲೆಯೂರುತ್ತದೆ. ಅಂತಹ ಚಿತ್ತವು ವಿಮುಕ್ತಿ ರಸವನ್ನು ತಡೆಯಿಲ್ಲದೆ ಸೇವಿಸುತ್ತದೆ.

9. ಸಪ್ಪಂಗ ಪನ್ಹೋ (ಸರ್ಪದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಸರ್ಪದ 3 ಗುಣಗಳಾವುವು?(264)
ಓ ಮಹಾರಾಜ, ಹೇಗೆ ಸರ್ಪ ತನ್ನ ಉದರದಿಂದಲೇ ಚಲಿಸುವುದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಪಞ್ಞದಿಂದ ಚಲಿಸುತ್ತಾನೆ. ಓ ರಾಜ, ಭಿಕ್ಷುವು ಪಞ್ಞದಿಂದಲೇ ಉನ್ನತಿ ಹೊಂದುತ್ತಾನೆ. ಧ್ಯಾನಶೀಲ ಭಿಕ್ಷುವಿನ ಚಿತ್ತವು ಜ್ಞಾನದ ಸ್ವಭಾವದ್ದಾಗಿರುತ್ತದೆ. ಆತನು ಅವಲಕ್ಷಣವನ್ನು ವಜರ್ಿಸಿ, ಸಲಕ್ಷಣವನ್ನು ವೃದ್ಧಿಸುತ್ತಾನೆ. ಇದೇ ಮಹಾರಾಜ, ಸರ್ಪವು ಹೊಂದಿರುವ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸರ್ಪವು ಔಷಧಿಯುತ ಗಿಡಗಳನ್ನು, ಅಂತಹವುಗಳನ್ನು ತೊರೆದು ಬೇರೆಡೆಯಿಂದ ಚಲಿಸುವುದೋ, ಅದೇರೀತಿ ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ ದುಶ್ಚರಿತವನ್ನು ಪರಿತ್ಯಜಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸರ್ಪದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಯಾವಾಗ ಸರ್ಪವು ಮನುಷ್ಯರನ್ನು ಕಂಡರೆ ತಕ್ಷಣ ತಪಿಸುವುದು, ಚಿಂತೆಗೀಡಾಗುವುದು, ಭೀತವಾಗುವುದು. ಪಾರಾಗಲು ಹಾದಿ ಹುಡುಕುವುದು. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿರುತ್ತಾನೆ. ಆತನಲ್ಲಿ ಕುವಿತರ್ಕಗಳು (ಕೆಟ್ಟ ಯೋಚನೆಗಳು), ಅತೃಪ್ತಿಯು ಉದಯಿಸಿದಾಗ ಆತನು ತಪಿಸುತ್ತಾನೆ, ಭೀತನಾಗುತ್ತಾನೆ, ಚಿಂತೆಯು ಆವರಿಸುತ್ತದೆ. ಆತನು ಆ ದುಃಸ್ಥಿತಿಗಳಿಂದ ಪಾರಾಗಲು ಹಾದಿ ಹುಡುಕುತ್ತಾನೆ. ಆಗ ಹೀಗೆ ಹೇಳಿಕೊಳ್ಳುತ್ತಾನೆ ಇಂದು ನಾನು ಏನಾದರೂ ಎಚ್ಚರ ತಪ್ಪಿದರೆ, ಎಂದಿಗೂ ನಾನು ಸರಿಹೊಂದಿಸಿಕೊಳ್ಳಲಾರೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸರ್ಪದ ತೃತೀಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಭಲ್ಲಾಟಿಯ ಜಾತಕದಲ್ಲಿ ಇಬ್ಬರು ಕಿನ್ನರರು ಹೀಗೆ ಹೇಳುತ್ತಾರೆ:
ಓ ಬೇಟೆಗಾರನೆ, ಇದೊಂದು ರಾತ್ರಿ ನಾವು ಮನೆಯಿಂದ ದೂರ ಕಳೆದಿದ್ದೇವೆ. ಹಾಗು ನಮ್ಮ ಇಚ್ಛೆಯ ವಿರುದ್ಧವಾಗಿ ಸಿಲುಕಿದ್ದೇವೆ ಮತ್ತು ಇಡೀ ರಾತ್ರಿಯು ಪರಸ್ಪರರ ಬಗ್ಗೆ ಯೋಚಿಸುತ್ತ ಕಾಲ ಕಳೆದಿದ್ದೇವೆ. ಆದರೂ ಇದೊಂದೇ ರಾತ್ರಿ ನಾವು ಶೋಕಿಸುವುದು ಮತ್ತು ದುಃಖಿಸುವುದು, ಮತ್ತೆಂದೂ ಇದು ಹಿಂತಿರುಗಲಾರದು.


10. ಅಜಗರ ಪನ್ಹೊ (ಹೆಬ್ಬಾವಿನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಹೆಬ್ಬಾವಿನ ಗುಣ ಯಾವುದು?(265)
ಓ ಮಹಾರಾಜ, ಹೇಗೆ ಹೆಬ್ಬಾವು ತನ್ನ ದೇಹದ ಉದ್ದದಂತೆ ಮಹತ್ತರವೋ, ಖಾಲಿ ಹೊಟ್ಟೆಯಲ್ಲೇ ಹಲವಾರು ದಿನಗಳು ಕಳೆಯುವುದೋ ಮತ್ತು ಅದಕ್ಕೆ ತನ್ನ ಹೊಟ್ಟೆ ತುಂಬಲು ಆಹಾರ ಇಲ್ಲದಿದ್ದರೂ ಸಹಾ ಅದು ಜೀವಂತವಾಗಿರುವಂತೆ ನಿರ್ವಹಿಸಿಕೊಳ್ಳುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿದವನಾಗಿ, ಆತನು ಆಹಾರಕ್ಕೆ, ದಾನಕ್ಕೆ ಅವಲಂಬಿತನಾಗಿರಬಹುದು. ಆದರೂ ಕೂಡದಿದ್ದುದನ್ನು ಆತನು ತೆಗೆದುಕೊಳ್ಳಲಾರ. ಆತನಿಗೆ ಹೊಟ್ಟೆ ತುಂಬಿಸಲು ಕಷ್ಟವಾಗಿರಬಹುದು, ಆದರೂ ಸಹಾ ಆತನು ಅರ್ಥ (ನಿಬ್ಬಾಣ) ವಶೀಕರಣ ಮಾಡಲು ತನ್ನನ್ನು ತೊಡಗಿಸಿಕೊಂಡಿರುತ್ತಾನೆ. ಆತನಿಗೆ ತಿನ್ನಲು ನಾಲ್ಕು ತುತ್ತು ಅಥವಾ ಮತ್ತೆ ಸಿಗಬಹುದು, ಮಿಕ್ಕ ಹೊಟ್ಟೆಯನ್ನು ಆತನು ನೀರಿನಿಂದಲೇ ತುಂಬಿಸಿಕೊಳ್ಳುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಹೆಬ್ಬಾವಿನ ಗುಣವಾಗಿದೆ ಮತ್ತು ಓ ರಾಜ, ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ತಿನ್ನುವುದು ಒಣ ಆಹಾರವೋ ಅಥವಾ ಹಸಿ ಆಹಾರವೋ ಅದನ್ನೇ ಇಲ್ಲವೆನ್ನುವುದರ ಬದಲು ಸೇವಿಸಲಿ. ಉತ್ತಮ ಭಿಕ್ಷುವು ಶೂನ್ಯದಲ್ಲೇ ಹೋಗುವನು ಮತ್ತು ಮಿತಾಹಾರಿ ಆಗಿಯೇ ಇರುವನು. ಆತನು ನಾಲ್ಕು ಅಥವಾ ಐದು ತುತ್ತು ಸೇವಿಸಿದ ನಂತರ ಹಾಗೆಯೇ ನೀರು ಕುಡಿಯಲಿ, ಯಾರ ಚಿತ್ತವು ಅರಹಂತತ್ವದ ಕಡೆಗೆ ಸುಲಭವಾಗಿ ನಾಟುವುದೋ ಆತನು ಇದನ್ನೆಲ್ಲಾ ಲೆಕ್ಕಿಸುವುದಿಲ್ಲ.
ಐದನೆಯ ಸಿಂಹವರ್ಗವು ಮುಗಿಯಿತು 

Milinda panha 11.4. ಉಪಚಿಕಾ ವಗ್ಗೋ

4. ಉಪಚಿಕಾ ವಗ್ಗೋ


1. ಉಪಚಿಕಂಗ ಪನ್ಹೊ (ಬಿಳಿ ಇರುವೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಬಿಳಿ ಇರುವೆಯ ಗುಣವು ಯಾವುದು? (246)
ಓ ಮಹಾರಾಜ, ಹೇಗೆ ಬಿಳಿ ಇರುವೆಯು ತನ್ನ ಛಾವಣಿಯನ್ನು ಸರಿಪಡಿಸಿಯೇ ಕೆಲಸಕ್ಕೆ ಹೋಗುವಂತೆ ಅದೇರೀತಿಯಲ್ಲಿ ಓ ರಾಜ, ಯತ್ನಶೀಲ ಭಿಕ್ಷುವು ನಿರಂತರ ಯತ್ನಶೀಲನಾಗಿ, ಭಿಕ್ಷಾಟನೆಗೆ ಹೋಗುವಾಗ ಜಾಗ್ರತಭಾವದಿಂದ ಮತ್ತು ಸ್ವನಿಯಂತ್ರಣದ ಛಾವಣಿ ಧರಿಸಿ ಹೋಗುತ್ತಾನೆ. ಹೀಗೆ ಆತನು ಹೋಗುವಾಗ ಎಲ್ಲಾರೀತಿಯ ಭಯಗಳಿಂದ ಮುಕ್ತನಾಗುತ್ತಾನೆ. ಇದೇ ಓ ಮಹಾರಾಜ, ಬಿಳಿ ಇರುವೆಯಿಂದ ಪಾಲಿಸಬೇಕಾದ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಥೇರ ಉಪಸೇನ ವಂಗಂತಪುತ್ರರು ಹೀಗೆ ಹೇಳಿದ್ದಾರೆ:
ಶೀಲ ಸಂಯಮಗಳನ್ನು ಧರಿಸಿ, ಸತ್ಯತೆಯ ಛಾವಣಿಯಲ್ಲಿ ಆಶ್ರಯ ಪಡೆದು ಮತ್ತು ಸಂಯಮದಿಂದ, ಲೋಕದಿಂದ ಭಾಧಿತನಾಗದೆ, ಎಲ್ಲಾರೀತಿಯ ಭಯಗಳಿಂದ ಮುಕ್ತನಾಗುತ್ತಾನೆ.

2. ವಿಳಾರ ಪನ್ಹೋ (ಬೆಕ್ಕಿನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಬೆಕ್ಕಿನ 2 ಗುಣಗಳಾವುವು? (247)
ಓ ಮಹಾರಾಜ, ಹೇಗೆ ಬೆಕ್ಕು ಗುಹೆಗಳಲ್ಲಿ, ರಂಧ್ರಗಳಲ್ಲಿ, ಮಹಡಿಗಳ ಒಳಗೆ ವಾಸಿಸುತ್ತದೋ, ಆದರೂ ಅದರ ಅನ್ವೇಷಣೆ ಇಲಿ ಹೆಗ್ಗಣಗಳೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಆತನು ಎಲ್ಲೇ ಹೋಗಲಿ ಅದು ಹಳ್ಳಿಯೇ ಆಗಿರಲಿ ಅಥವಾ ಕಾಡೇ ಆಗಿರಲಿ ಅಥವಾ ಮರದ ಬುಡವೇ ಆಗಿರಲಿ, ಅಥವಾ ಶೂನ್ಯ ಗೃಹವೇ ಆಗಿರಲಿ, ಆತ ಸತತ ಸ್ಮೃತಿವಂತನಾಗಿ, ಅಪ್ರಮಾದದಿಂದ ಇರುತ್ತಾನೆ. ಅವನ ಆಹಾರವೇ ಕಾಯಗತಾಸ್ಮೃತಿ ಆಗಿದೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾಗಿರುವ ಬೆಕ್ಕಿನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಬೆಕ್ಕು ತನ್ನ ಬೇಟೆಯನ್ನು ಬೆನ್ನಟ್ಟುವ ಮುನ್ನ ಕುಗ್ಗಿ ಕುಳಿತಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ, ಪಂಚ ಉಪಾದಾನ ಖಂಧಗಳಲ್ಲಿ ಉದಯ ಅಳಿವುಗಳ ವೀಕ್ಷಣೆಯಲ್ಲಿ ವಿಹರಿಸುತ್ತಾನೆ. ಹೇಗೆಂದರೆ ಇದೇ ದೇಹ, ಇದೇ ದೇಹದ ಉದಯ, ಇದೇ ದೇಹದ ಅಂತ್ಯ, ಹಾಗೆಯೇ ಇದೇ ವೇದನೆಗಳು, ಇವೇ ವೇದನಾಗಳ ಉದಯ, ಇದೇ ವೇದನಾ ನಿರೋಧ, ಇವೇ ಸಞ್ಞಾ, ಇವೇ ಸಂಞ್ಞಗಳ ಉದಯ ಇವೇ ಸಂಞ್ಞಗಳ ಕೊನೆ ಇವೇ ಸಂಖಾರಗಳು, ಇವೇ ಸಂಖಾರಗಳ ಉದಯ, ಇವೇ ಸಂಖಾರಗಳ ಕೊನೆ, ಇದೇ ವಿಞ್ಞಾನ, ಇದೇ ವಿಞ್ಞಾನದ ಕೊನೆ ಇದೇ ಮಹಾರಾಜ ಭಿಕ್ಷುವು ಹೊಂದಬೇಕಾದ ಬೆಕ್ಕಿನ ದ್ವಿತೀಯ ಅಂಗವಾಗಿದೆ.
ಇದರ ಬಗ್ಗೆ ಓ ಮಹಾರಾಜ, ಭಗವಾನರು ದೇವಾದಿದೇವರು ಹೀಗೆ ಹೇಳಿದ್ದಾರೆ: ಭವಿಷ್ಯದಲ್ಲಿ ಸ್ಥಿತಿಗಳಲ್ಲಿ ಪುನರ್ಜನ್ಮವನ್ನು ಹುಡುಕಬೇಡ, ಸ್ವರ್ಗವು ತಾನೇ ಏನು ಲಾಭವಾಗಬಲ್ಲದು. ಈಗಿನ ವರ್ತಮಾನ ಜಗತ್ತಿನಲ್ಲಿ ಮತ್ತು ಈ ಸ್ಥಿತಿಯಲ್ಲಿ ನಿನ್ನನ್ನು ಹುಡುಕಿಕೊಳ್ಳುತ್ತ ಜಯಶಾಲಿಯಾಗು.

3. ಉಂದುರಂಗ ಪನ್ಹೊ (ಇಲಿ/ಹೆಗ್ಗಣ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು, ಹೆಗ್ಗಣದ ಯಾವ ಒಂದು ಗುಣದಿಂದ ಹೊಂದಿಕೊಳ್ಳಬೇಕು? (248)
ಓ ಮಹಾರಾಜ, ಹೇಗೆ ಇಲಿಯು ಮುಂದೆ ಮತ್ತು ಹಿಂದೆ ಅಡ್ಡಾಡುತ್ತಿರುತ್ತದೋ ಸದಾ ಆಹಾರಕ್ಕಾಗಿ ಹುಡುಕಾಡುತ್ತಿರುತ್ತದೋ, ಅದೇರೀತಿಯಾಗಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಸದಾ ಚಿತ್ತದಲ್ಲಿ ಯೋಗ್ಯವಾದ ಜ್ಞಾನೋಚಿತ ಗಮನಹರಿಸುವಿಕೆ ಯಿಂದಲೇ ತಲ್ಲೀನನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಇಲಿಯ ಒಂದು ಗುಣವಾಗಿದೆ. ಓ ರಾಜ ಇದರ ಬಗ್ಗೆ ಥೇರ ಉಪಸೇನ ವಂಗಂತಪುತ್ರರು ಹೀಗೆ ಹೇಳಿದ್ದಾರೆ:
ಸದಾ ಜಾಗೃತನಾಗಿ ಶಾಂತನಾಗಿರು, ಓ ವಿಪಸ್ಸನ ಸಾಧಕನೇ ಎಲ್ಲಕ್ಕಿಂತ ಶ್ರೇಷ್ಠವೆಂದು ಪ್ರಜ್ಞಾವೆಂದು ತೂಗಿ, ಎಲ್ಲಾ ಬಯಕೆಗಳಿಂದ, ಸುಖಗಳಿಂದ ದೂರವಾಗಿ ಸ್ವತಂತ್ರನಾಗಿರು?

4. ವಿಚ್ಛಿಕಂಗ ಪನ್ಹೊ (ಚೇಳಿನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಚೇಳಿನ ಒಂದು ಗುಣ
ಯಾವುದು? (249)
ಓ ಮಹಾರಾಜ, ಹೇಗೆ ಚೇಳಿಗೆ ತನ್ನ ಬಾಲವೇ ಆಯುಧವೋ ಮತ್ತು ಅದು ಚಲಿಸುವಾಗ ಬಾಲವನ್ನು ನೇರವಾಗಿಟ್ಟುಕೊಂಡೇ ಹೋಗುವುದೋ ಅದೇರೀತಿಯಲ್ಲಿ ಓ ಮಹಾರಾಜ, ಪ್ರಯತ್ನಶಾಲಿ ಭಿಕ್ಷುವು, ಧ್ಯಾನಿಯು ತನ್ನ ಜ್ಞಾನವನ್ನೇ ಆಯುಧವಾಗಿ ಹೊಂದುತ್ತಾನೆ ಮತ್ತು ತನ್ನ ಜ್ಞಾನಾಯುಧವನ್ನು ಸಿದ್ಧವಾಗಿಯೇ ಇಟ್ಟುಕೊಂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚೇಳಿನ ಗುಣವಾಗಿದೆ. ಮತ್ತು ಇದರ ಬಗ್ಗೆ ಓ ರಾಜ, ಥೇರ ಉಪಸೇನ ವಂಗಂತಪುತ್ರರು ಹೀಗೆ ಹೇಳಿದ್ದಾರೆ:
ಜ್ಞಾನ ಖಡ್ಗವನ್ನು ಹಿಡಿದುಕೊಂಡು, ವಿಹರಿಸು ಓ ವಿಪಸ್ಸನ ಸಾಧಕನೇ (ಜ್ಞಾನಿಯೇ) ಸದಾ ಸಂಗ್ರಾಮದಲ್ಲಿ ಅಜೇಯನಾಗಿ ಸರ್ವಭಯಗಳಿಂದ ಮುಕ್ತನಾಗು.

5. ನಕುಲಂಗ ಪನ್ಹೊ (ಮುಂಗೂಸಿಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಮಂಗೂಸಿಯ ಒಂದು ಗುಣ ಯಾವುದು? (250)
ಓ ಮಹಾರಾಜ, ಹೇಗೆ ಮುಂಗೂಸಿಯು ಸರ್ಪಕ್ಕೆ ಆಕ್ರಮಣ ಮಾಡುವ ಮುನ್ನ, ತನ್ನ ಶರೀರವನ್ನು ಪ್ರತ್ಯೌಷಧಗಳಿಂದ ರಕ್ಷಿಸಿಕೊಂಡಿರುತ್ತದೋ, ಅದೇರೀತಿಯಲ್ಲಿ ಓ ರಾಜ, ಧ್ಯಾನಶೀಲನು, ಕ್ರೋಧದಿಂದ, ಆಘಾತಗಳಿಂದ, ದ್ವೇಷದಿಂದ, ಕಲಹದಿಂದ, ವಿಗ್ರಹ, ವಿವಾದ, ವಿರೋಧಗಳಿಂದ ವ್ಯಾಪಿತವಾದ ಈ ಲೋಕದಲ್ಲಿ ಸಂಚರಿಸುವಾಗ, ವ್ಯವಹರಿಸುವಾಗ ಅದಕ್ಕೆ ಮುಂಚೆಯೇ ಮಹಾ ಪ್ರತ್ಯೌಷಧಿಯಾದ ಮೈತ್ರಿಯಿಂದ ಕೂಡಿದವನಾಗಿರುತ್ತಾನೆ. ಮೈತ್ರಿಯಿಂದ ಕೂಡಿರುವಾಗ ಆತನಿಗೆ ಯಾವ ಹಾನಿಯು ಆಗದು. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಮುಂಗೂಸಿಯ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ಧಮ್ಮಾಸೇನಾನಿ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಆದ್ದರಿಂದ ಮೆತ್ತಭಾವನೆಯಿಂದ ತನ್ನ ಬಂಧುಗಳಂತೆ ಪರರಿಗೂ, ಅಪರಿಚಿತರಿಗೂ ಮತ್ತು ಇಡೀ ಜಗತ್ತಿಗೂ ಮೆತ್ತಾಭಾವನೆಯಿಂದ (ಮೆತ್ತ ಚಿತ್ತದಿಂದ) ವ್ಯಾಪಿಸಬೇಕು. ಇದೇ ಬುದ್ಧರ ಶಾಸನವಾಗಿದೆ.

6. ಜರಸಿಂಗಾಲ ಪನ್ಹೊ (ಮುದಿನರಿಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಮುದಿನರಿಯ ಯಾವ 2 ಗುಣಗಳಿಂದ
ಕೂಡಿರಬೇಕು? (251)
ಓ ಮಹಾರಾಜ, ಹೇಗೆ ಮುದಿನರಿಯು ಯಾವುದೇ ಆಹಾರವು ಸಿಗಲಿ ಅದು ಅಸಹ್ಯಪಡುವುದಿಲ್ಲ. ಅದು ಅಗತ್ಯವಿದ್ದಷ್ಟು ತಿನ್ನುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ತನ್ನನ್ನು ಜೀವಂತವಾಗಿರಿಸುವ ಸಲುವಾಗಿ ಏನೇ ಆಹಾರವು ಭಿಕ್ಷೆಯಲ್ಲಿ ದೊರೆತರೂ ಅದನ್ನು ತಿನ್ನುತ್ತಾನೆ. ಇದೇ ಓ ರಾಜ, ಮುದಿನರಿಯಲ್ಲಿ ಕಂಡುಬರುವ ಭಿಕ್ಷು ಪಾಲಿಸುವಂತಹ ಗುಣವಾಗಿದೆ. ಇದರ ಬಗ್ಗೆ ಓ ರಾಜ ಥೇರ ಮಹಾಕಸ್ಸಪರವರು ಹೀಗೆ ಹೇಳಿದ್ದಾರೆ:
ನನ್ನ ವಾಸಸ್ಥಳವನ್ನು ಬಿಡುತ್ತಾ ನಾನು ಆಹಾರಕ್ಕೆ ಹೊರಟೆನು. ಹಳ್ಳಿಯ ಹಾದಿಯಲ್ಲಿ ಅಲ್ಲಿ ಒಬ್ಬ ಕುಷ್ಠರೋಗಿಯು ಆಹಾರ ಸೇವಿಸುತ್ತಿದ್ದನು. ಆತನನ್ನು ಕಂಡು ಆತ ದಾನ ನೀಡಲೆಂದು, ಇಚ್ಛಾಪೂರ್ವಕವಾಗಿ ಆತನ ಬಳಿಯಲ್ಲಿ ನಿಂತೆನು.  ಆತನು ತನ್ನ ಕುಷ್ಟರೋಗದ ಕೈಯಿಂದ ನನ್ನ ಪಿಂಡಪಾತ್ರೆಗೆ ಮುಷ್ಠಿ ಅನ್ನವನ್ನು ಹಾಕಿದನು. ಹಾಗೆ ಹಾಕುವಾಗ ಆತನ ಶಿಥಿಲ ಬೆರಳೊಂದು ಸಹ ಮುರಿದು ಪಿಂಡಪಾತ್ರೆಯಲ್ಲಿ ಬಿದ್ದಿತು. ಗೋಡೆಯ ಬದಿಯಲ್ಲಿ ಕುಳಿತು ಮುಷ್ಠಿ ಆಹಾರವನ್ನು ನಾನು ಅಂತರಂಗದಲ್ಲಿ ಯಾವುದೇ ಅಸಹ್ಯವನ್ನು ತಾಳದೆ ತಿಂದೆನು.
ಮತ್ತೆ ಓ ರಾಜ, ಹೇಗೆ ಮುದಿನರಿಗೆ ಆಹಾರವು ಸಿಕ್ಕಾಗ ಅದು ಪರೀಕ್ಷಿಸಿಕೊಂಡು ನಿಲ್ಲುವುದಿಲ್ಲ. ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ಆತನಿಗೆ ಆಹಾರ ದೊರೆತಾಗ, ಆತನು ಅದು ಕಹಿಯೋ, ಸಿಹಿಯೋ, ಸುಗಂಧಿತವೋ ಅಥವಾ ದುರ್ಗಂಧಿತವೋ ಗಮನಿಸದೆ ಸೇವಿಸುತ್ತಾನೆ. ಇದೇ ಓ ರಾಜ, ಮುದಿನರಿಯ ಗುಣಗಳನ್ನು ಭಿಕ್ಷುವು ಹೊಂದಬೇಕಾಗಿದೆ. ಇದರ ಬಗ್ಗೆ ಓ ರಾಜ, ಥೇರ ಉಪಸೇನಾ ವಂಗಂತಪುತ್ತರು ಹೀಗೆ ಹೇಳುತ್ತಾರೆ:
ಕಹಿಯಾದ ಆಹಾರದಲ್ಲು ಆತನು ಆನಂದಿತನಾಗುತ್ತಾನೆ. ಹಾಗೆಯೇ ಸಿಹಿಯನ್ನೇ ಬಯಸಲಾರ, ಯಾರ ಚಿತ್ತವು ರಸಲಾಲಸೆಯನ್ನು ಹೊಂದಿರುವುದೋ ಅದು ಉನ್ನತ ಸಮಾಧಿ ಸ್ಥಿತಿಗಳಲ್ಲಿ ಆನಂದಿಸಲಾರದು. ಯಾರು ಸಿಕ್ಕಷ್ಟರಲ್ಲೇ ಸಂತೃಪ್ತನೋ ಆತನು ಮಾತ್ರ ಸಮನತ್ವವನ್ನು ಪೂರ್ಣಗೊಳಿಸುವನು.

7. ಮಿಗಂಗ ಪನ್ಹೊ (ಜಿಂಕೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಜಿಂಕೆಯ ಯಾವ 3 ಗುಣಗಳನ್ನು ಹೊಂದಿರ ಬೇಕು? (252)
ಓ ಮಹಾರಾಜ, ಹೇಗೆ ಜಿಂಕೆಯು ಪದೇಪದೇ ಅಡವಿಗೆ ಹಗಲಿನಲ್ಲೇ ಹೋಗುವುದು ಮತ್ತು ರಾತ್ರಿಯು ತೆರೆದ ಗಾಳಿಯಲ್ಲಿರುವುದು. ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ಹಗಲಿನಲ್ಲಿ ಕಾಡಿನಲ್ಲಿ ನೆಲೆಸಿ, ರಾತ್ರಿಯಲ್ಲಿ ತೆರೆದ ಆಕಾಶದಲ್ಲಿ ಇರುತ್ತಾನೆ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಜಿಂಕೆಯ ಪ್ರಥಮ ಗುಣವಾಗಿದೆ. ಇದರ ಬಗ್ಗೆ ಓ ರಾಜ, ದೇವಾದಿದೇವ ಭಗವಾನರು ಲೋಮಹಂಸಕನ ಪರಿಯಾಯದಲ್ಲಿ ಹೀಗೆ ಹೇಳಿದ್ದಾರೆ:
ಮತ್ತು ನಾನು, ಸಾರಿಪುತ್ರ ರಾತ್ರಿಯು ತಂಪಾಗಿರುವಾಗ ಮತ್ತು ಹೇಮಂತ ಋತುವಿನಲ್ಲಿ ಮತ್ತು ಯಾವಾಗ ಹಿಮವು ಬೀಳುತ್ತಿರುವುದೋ ಅಂತಹ ಸಮಯದಲ್ಲಿ ನಾನು ತೆರೆದ ಆಕಾಶದಲ್ಲೇ ಕಾಲ ಕಳೆಯುತ್ತಿದ್ದೆನು ಮತ್ತು ಹಗಲನ್ನು ಕಾಡಿನಲ್ಲಿ ಕಳೆಯುತ್ತಿದ್ದನು ಮತ್ತು ಬೇಸಿಗೆಯ ಕೊನೆಯ ಮಾಸದಲ್ಲಿ ನಾನು ಹಗಲಿನಲ್ಲಿ ತೆರೆದ ಆಕಾಶದಲ್ಲಿದ್ದು ರಾತ್ರಿಯಲ್ಲಿ ಅರಣ್ಯದಲ್ಲೇ ವಾಸಿಸುತ್ತಿದ್ದೆನು.
ಮತ್ತೆ ಓ ರಾಜ, ಹೇಗೆ ಜಿಂಕೆಯ ಬಾಣವನ್ನು ಬಿಡುವಾಗ ಅಥವಾ ಈಟಿಯನ್ನು ಎಸೆಯುವಾಗ ಅದು ಬಾಗಿ ಅಥವಾ ಹಾರಿ ಅಥವಾ ಪಕ್ಕಕ್ಕೆ ಸರಿದು ಪರಾರಿಯಾಗುತ್ತದೆ. ತನ್ನ ದೇಹವನ್ನು ಗಾಸಿಯಾಗುವುದಕ್ಕೆ ಬಿಡಿವುದಿಲ್ಲ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿ, ಆತನಲ್ಲಿ ಪಾಪಯುತವಾದ ಇಚ್ಛೆಗಳು, ಯೋಚನೆಗಳು ಉಂಟಾದರೂ ಅದಕ್ಕೆ ಸಿಕ್ಕಿಕೊಳ್ಳುವುದಿಲ್ಲ. ಅದರಿಂದ ಪಾರಾಗುತ್ತಾನೆ. ತನ್ನ ಚಿತ್ತದಲ್ಲಿ ಆ ವಿತರ್ಕವನ್ನು ಇಡಲಾರ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಜಿಂಕೆಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಜಿಂಕೆಗೆ ಮಾನವರು ಕಂಡುಬಂದರೆ ಅದು ಈ ಬದಿಗೆ ಅಥವಾ ಆ ಬದಿಗೆ ಪರಾರಿಯಾಗಿ ಜನರ ಕಣ್ಣಿಗೆ ಬೀಳದಂತೆ ಹೋಗುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲತೆಯಿಂದ ಕೂಡಿ, ಜಗಳವಾಡುವ ಜನರನ್ನು ಕಂಡಾಗ, ವಿವಾದಶೀಲ, ದುಶ್ಶೀಲರನ್ನು ಕಂಡಾಗ, ಅಥವಾ ಸೋಮಾರಿಗಳನ್ನು, ಸಂಗಗಳಲ್ಲಿ ನಲಿಯುವ ಜನರನ್ನು ಕಂಡಾಗ ಆತನು ಈ ದಾರಿಯನ್ನು ಆ ದಾರಿಯನ್ನು ಬಳಸಿ ಅವರ ಕಣ್ಣಿಗೆ ಕಾಣದಂತೆ ಅದೃಷ್ಯನಾಗುತ್ತಾನೆ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಜಿಂಕೆಯ ತೃತೀಯ ಗುಣವಾಗಿದೆ. ಇದರ ಬಗ್ಗೆ ಧಮ್ಮಸೇನಾನಿ ಮಹಾಥೇರರಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ: ಪಾಪಿಚ್ಛೆವುಳ್ಳವನು ಸೋಮಾರಿಯು, ಹೀನವೀರ್ಯನು, ಉತ್ಸಾಹಹೀನನು ಅಲ್ಪಶ್ರುತನು, ಅನಾಚಾರಿಯು ನನಗೆ ಎಲ್ಲಿಯೂ ಯಾವಾಗಲೂ ನನ್ನ ಸಂಗಾತಿಯಾಗದಿರಲಿ ಅಥವಾ ನನ್ನೊಂದಿಗೆ ಇರದಿರಲಿ.

8. ಗೊರೂಪಂಗ ಪನ್ಹೊ (ಗೂಳಿಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷು ಗೂಳಿಯ ಯಾವ ನಾಲ್ಕು ಗುಣಗಳಿಂದ
ಕೂಡಿರಬೇಕು? (253)
ಓ ಮಹಾರಾಜ, ಹೇಗೆ ಗೂಳಿಯು ಎಂದಿಗೂ ತನ್ನ ಕೊಟ್ಟಿಗೆಯನ್ನು ಬಿಡಲಾರದೊ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ಎಂದಿಗೂ ತನ್ನ ಕಾಯದ ಬಗ್ಗೆ ತಪ್ಪು ಅಭಿಪ್ರಾಯ ತಾಳದೆ, ಈ ರೀತಿಯ ಯೋಗ್ಯ ತಿಳುವಳಿಕೆ ಹೊಂದಿರುತ್ತಾನೆ: ಈ ಶರೀರವು ಅನಿತ್ಯವಾದುದು, ಶಿಥಿಲವಾಗುವಂತಹುದು, ವಿಘಟವಾಗುವಂತಹುದು, ಅಸಹ್ಯವು ಜರಾಮರಣಕ್ಕೆ ಈಡಾಗುವಂತಹುದು. ಇದೇ ಓ ರಾಜ, ಭಿಕ್ಷು ಹೊಂದಿರುವ ಗೂಳಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ಗೂಳಿಯು ನೇಗಿಲನ್ನು ಹೊತ್ತುಕೊಂಡಾಗ, ಅದು ನೋವಾಗಲಿ ಅಥವಾ ಹಿತಕರವಾಗಲಿ ಅದನ್ನು ಸಹಿಸಿಕೊಳ್ಳುತ್ತದೆ. ಅದೇರೀತಿ ಓ ರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ, ಸಮಣ ಜೀವನದಲ್ಲಿ ಹೊಕ್ಕಾಗ, ಅದರೊಂದಿಗೆ ಇರುತ್ತಾನೆ. ಸುಖವಾಗಲಿ ಅಥವಾ ದುಃಖವಾಗಲಿ, ಜೀವಿತದ ಕೊನೆಯವರೆಗೂ, ಕೊನೆ ಉಸಿರಿನವರೆಗೂ ಸಮಣ ಜೀವನದಲ್ಲಿ ಯೋಗ್ಯವಾಗಿ ಜೀವಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಳಿಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಗೂಳಿಯು ನೀರನ್ನು ಕುಡಿಯುವಾಗ ಎಂದಿಗೂ ತೃಪ್ತಿಯಾಗಲಾರದು. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ಗುರುಗಳಿಂದ, ಆಚಾರ್ಯರಿಂದ ಉಪದೇಶ ಪಡೆಯುವಾಗ ಆನಂದಿತವಾಗಿ ಎಂದಿಗೂ ತೃಪ್ತಿಹೊಂದಲಾರ. ಇದೇ ಓ ರಾಜ, ಗೂಳಿಯು ಹೊಂದಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಗೂಳಿಗೆ ಯಾರೇ ನೇಗಿಲು ತೊಡಿಸಲಿ, ಸಮವಾಗಿ ಸಹಿಸುವುದು. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನ ಬೋಧನೆ ನೀಡುವವರು ಯಾರೇ ಆಗಲಿ, ಅವರು ಆಚಾರ್ಯರು, ಹಿರಿಯರು, ಕಿರಿಯರು ಗೃಹಸ್ಥರು ಯಾರೇ ಆಗಲಿ ಬೋಧಿಸುವಾಗ ತಲೆಬಾಗಿಸಿ ಅದನ್ನು ಸ್ವೀಕರಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಗೂಳಿಯ ನಾಲ್ಕನೆಯ ಗುಣವಾಗಿದೆ.  ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
7 ವರ್ಷದ ಸಮಣೇರನಾಗಲಿ, ಇಂದೇ ಸಂಘಕ್ಕೆ ಸೇರಿದವನಾಗಲಿ, ಆತನು ಸಹಾ ನನಗೆ ಬೋಧಿಸಿದರೆ, ತಲೆಬಾಗಿಸಿ ಆನಂದದಿಂದ ಆತನ ಬುದ್ಧಿವಾದವನ್ನು ಸಹಿಸುವೆನು. ಕಾಲಕಾಲಕ್ಕೆ ಆತನ ಭೇಟಿಯಾದಾಗ ವಾತ್ಯಲ್ಯದಿಂದ, ಮೈತ್ರಿಯಿಂದ ಆತನನ್ನು ಕಾಣುತ್ತೇನೆ, ಆತನು ಶುದ್ಧನಾಗಿದ್ದರೆ ಗುರು ಸ್ಥಾನದಲ್ಲಿ ಕಾಣುತ್ತೇನೆ.

9. ವರಾಹಂಗ ಪನ್ಹೋ (ಹಂದಿಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹಂದಿಯ ಯಾವ 2 ಗುಣಗಳನ್ನು ಹೊಂದಿರ
ಬೇಕು? (254)
ಓ ಮಹಾರಾಜ, ಹೇಗೆ ಹಂದಿಯು ಗೀಷ್ಮ ಮಾಸದಲ್ಲಿ ನೀರು ಇರುವ ಕಡೆ ಆಶ್ರಯ ಪಡೆಯುತ್ತದೆ. ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿರುತ್ತಾನೆ. ಯಾವಾಗ ಆತನ ಚಿತ್ತವು ಚದುರುತ್ತದೋ ಮತ್ತು ಬೀಳುವಂತಿರುತ್ತದೋ ಕೋಪದಿಂದ ವ್ಯಗ್ರವಾಗಿದೆಯೋ, ಆಗ ಆತನು ಮೈತ್ರಿಯ ತಂಪಾದ ಸಿಹಿ ನೀರಿನಿಂದ ಚೈತನ್ಯ ಪಡೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಹಂದಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಹಂದಿಯು ಕೆಸರಿನಲ್ಲಿ ಆಶ್ರಯ ಪಡೆಯುತ್ತದೋ, ಅದು ಕೆಸರಿನಲ್ಲಿ ಅಗೆಯುತ್ತ, ತನ್ನ ಮೂತಿಯಿಂದ ಕೊರೆಯುತ್ತ ನೀರಿನ ತೊಟ್ಟಿಯಂತೆ ಮಾಡಿ ಅದರಲ್ಲಿ ತಂಪಾಗಿ ನೆಲೆಸುತ್ತದೊ, ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಕಾಯದ ಮೇಲೆ ಚಿತ್ತವಿಟ್ಟು ಮಲಗುತ್ತ ಕಾಯಗತಸತಿ ಸಾಧಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಿರುವ ಹಂದಿಯ ದ್ವಿತೀಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಪಿಂಡೋಲ ಭಾರಧ್ವಜ ಥೇರರು ಹೀಗೆ ಹೇಳಿದ್ದಾರೆ:
ಏಕಾಂಗಿಯಾಗಿ ಯಾರು ಹತ್ತಿರವಿರದೆ, ವಿಪಸ್ಸನ ಸಾಧಕನು, ಈ ಕಾಯದ ನಿಜಸ್ವರೂಪವನ್ನು ಅರಿಯಲು ಸಂಶೋಧಿಸುತ್ತಾನೆ. ಆಳ ಚಿಂತನೆಯ ಮಧುರವಾದ ಹಾಸಿಗೆಯಲ್ಲಿ ಆತನು ಮಲಗಿ ವಿಶ್ರಮಿಸುತ್ತಾನೆ.

10. ಹತ್ಥಿಂಗ ಪನ್ಹೊ (ಆನೆಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಆನೆಯ ಐದು ಗುಣ
ಗಳಾವುವು? (255)
ಓ ಮಹಾರಾಜ, ಹೇಗೆ ಆನೆಯು ನಡೆಯುತ್ತದೋ ಆಗ ಅದು ಭೂಮಿಯನ್ನು ತುಳಿಯುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಕಾಯದ ಸ್ವರೂಪದಲ್ಲಿ ನೈಪುಣ್ಯತೆ ಪಡೆದು, ಪಾಪವನ್ನು ತುಳಿಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಆನೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಆನೆಯು ನೋಡುವಾಗ ಅದು ಇಡೀ ಶರೀರವನ್ನು ತಿರುಗಿಸಿ ನೋಡುತ್ತದೆ. ಸದಾ ತನ್ನ ಎದುರಿಗೆ ನೇರವಾಗಿ ನೋಡುತ್ತದೆ ಮತ್ತು ಈ ರೀತಿ ಆ ರೀತಿಯಾಗಿ ದೃಷ್ಟಿ ಹರಿಸುವುದಿಲ್ಲ. ಅದೇರೀತಿ ಓ ಮಹಾರಾಜ, ಧ್ಯಾನಶೀಲನಾದ ಭಿಕ್ಷುವು ಪ್ರಯತ್ನಪರನಾಗಿ, ಆತನು ನೋಡುವಾಗ ಇಡೀ ಶರೀರವನ್ನು ತಿರುಗಿಸುತ್ತಾನೆ. ಸದಾ ತನ್ನ ನೇರಕ್ಕೆ ನೋಡುತ್ತಾನೆ. ಈ ಕಡೆ, ಆ ಕಡೆ ದೃಷ್ಟಿಹರಿಸುವುದಿಲ್ಲ. ಎತ್ತರದ ಕಡೆ ನೋಡುವುದಿಲ್ಲ. ಹಾಗೆಯೇ ಪಾದದ ಕಡೆಗೂ ನೋಡುವುದಿಲ್ಲ. ಆದರೆ ಕಣ್ಣುಗಳನ್ನು ಕೇಂದ್ರೀಕರಿಸಿ ತನ್ನಿಂದ ನೇಗಿಲ ದೂರವಷ್ಟು ನೆಲಕ್ಕೆ ನೋಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಆನೆಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಆನೆಗೆ ಯಾವುದು ಶಾಶ್ವತ ವಿಶ್ರಾಂತಿ ತಾಣ ಇರುವುದಿಲ್ಲ. ಹಾಗೆಯೇ ಅದರ ಆಹಾರ ಸಿಗುವ ಸ್ಥಳವು ಒಂದೇ ನಿಧರ್ಿಷ್ಟ ಸ್ಥಳವಲ್ಲ, ಹಾಗೆಯೇ ನಿದರ್ಿಷ್ಟವಾದ ವಾಸಸ್ಥಳವು ಅದಕ್ಕೆ ಇಲ್ಲ. ಓ ಮಹಾರಾಜ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವಿಗೂ ನಿದರ್ಿಷ್ಟ ವಿಶ್ರಾಂತಿ ಸ್ಥಳವಾಗಲಿ, ನಿದರ್ಿಷ್ಟ ಆಹಾರ ಸಿಗುವ ಮನೆಯಾಗಲಿ, ನಿಧರ್ಿಷ್ಟ ವಾಸಸ್ಥಳವೂ ಇಲ್ಲ. ಬದಲಾಗಿ ಆತನು ಭಿಕ್ಷೆಯಿಂದ ಆಹಾರ ಪಡೆದು, ಪೂರ್ಣ ಪ್ರಜ್ಞೆಯಿಂದ ಅವನಿಗೆ ಎಲ್ಲಿ ಇಷ್ಟವಾಗುತ್ತದೋ ಅದೇ ಆತನ ವಾಸಸ್ಥಳವಾಗುತ್ತದೆ. ಅದು ಕುಟೀರವಾಗಿರಬಹುದು, ಮರದ ಬುಡವಾಗಿರಬಹುದು, ಗುಹೆಯಾಗಿರಬಹುದು, ಪರ್ವತದ ಬದಿಯಾಗಿರಬಹುದು, ಹೀಗೆ ನಿಲರ್ಿಪ್ತತೆಯಿಲ್ಲದೆ ಆತನು ವಾಸಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಆನೆಯ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆನೆಯು ನೀರಿನಲ್ಲಿ ಕ್ರೀಡೆಯಾಡುತ್ತದೋ, ಭವ್ಯವಾದ ಕಮಲಗಳ ಕೊಳದಲ್ಲಿ ತಂಪಾದ, ಪರಿಶುದ್ಧವಾದ, ಸ್ಪಷ್ಟವಾದ ತುಂಬಿದ ಆ ಸರೋವರದಲ್ಲಿ ಎಲ್ಲ ಹಳದಿ, ನೀಲಿ, ಕೆಂಪು ಮತ್ತು ಶ್ವೇತ ಕಮಲಗಳು ಇವೆಯೋ ಅಲ್ಲಿ ಆ ಬೃಹತ್ ಪ್ರಾಣಿಗಳು ಆನಂದಿಸುತ್ತವೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಭವ್ಯವಾದ ಮಹಾ ಸ್ಮೃತಿಪಟ್ಠಾನದ ಪುಷ್ಕರಣೆಯಲ್ಲಿ ಮುಳುಗುತ್ತಾನೆ, ಈಜುತ್ತಾನೆ, ಅಲ್ಲಿ ವಿಮುಕ್ತಿಯ ಪುಷ್ಪಗಳು ನೆರೆದಿವೆ, ನಿರ್ಮಲವಾದ ಸತ್ಯದ ಮಧುರವಾದ ನೀರು ಅಲ್ಲಿರುತ್ತದೆ. ಅಲ್ಲಿ ಆತನು ತನ್ನ ಜ್ಞಾನದಿಂದಲೇ ಸಂಖಾರಗಳನ್ನು ದೂರೀಕರಿಸುತ್ತಾನೆ. ಈ ರೀತಿಯ ಮಾನಸ ಲೋಕದಲ್ಲಿ ಆತನು ಕ್ರೀಡೆಯಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆನೆಗಳ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ರಾಜ, ಆನೆಯು ಎಚ್ಚರಿಕೆಯಿಂದ ಪಾದವನ್ನು ಮೇಲೆ ಎತ್ತುತ್ತದೆ ಮತ್ತು ಹಾಗೆಯೇ ಪಾದವನ್ನು ಎಚ್ಚರಿಕೆಯಿಂದ ಕೆಳಗೆ ಇಳಿಸುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ, ಪರಿಶ್ರಮಯುತನಾಗಿ, ಜಾಗೃತ ಭಾವದಿಂದ ಸ್ಪಷ್ಟವಾದ ಅರಿವಿನಿಂದ ಪಾದವನ್ನು ಎತ್ತುತ್ತಾನೆ ಮತ್ತು ಸ್ಮೃತಿಯಿಂದ ಸ್ಪಷ್ಟವಾದ ಅರಿವಿನಿಂದ ಪಾದವನ್ನು ನೆಲಕ್ಕೆ ಇಡುತ್ತಾನೆ. (ಈ ರೀತಿಯಲ್ಲಿ ನಡಿಗೆಯ ಧ್ಯಾನ ಮಾಡುತ್ತಾನೆ). ಅದೇರೀತಿಯಲ್ಲಿ ಹೋಗುವಾಗ ಅಥವಾ ಹಿಂತಿರುಗುವಾಗ, ಕೈ ಮಡಚುವಾಗ ಹಾಗೆಯೇ ತೆರೆಯುವಾಗ, ಆತನು ಎಲ್ಲೇ ಇರಲಿ, ಆತನು ಸದಾ ಸ್ಮೃತಿವಂತನಾಗಿರುತ್ತಾನೆ ಮತ್ತು ಸ್ಪಷ್ಟ ಅರಿವಿನಿಂದ ಕೂಡಿರುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಆನೆಯ ಪಂಚಮ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಹೀಗೆ ಸಂಯುಕ್ತ ನಿಕಾಯದಲ್ಲಿ ಹೇಳಿದ್ದಾರೆ:
ಕಾಯದಲ್ಲಿ ಸಂಯಮದಿಂದಿರುವುದು ಒಳ್ಳೆಯದು. ಮಾತಿನಲ್ಲಿ ಸಂಯಮದಿಂದ ಇರುವುದು ಒಳ್ಳೆಯದು. ಮನಸ್ಸಿನಲ್ಲಿ ಸಂಯಮದಿಂದಿರುವುದು ಒಳ್ಳೆಯದು. ಎಲ್ಲರದಲ್ಲೂ ಸಂಯಮದಿಂದಿದ್ದು ಆತನು ಪಾಪಲಜ್ಜೆಯಿಂದ ಕೂಡಿದ್ದು, ಎಲ್ಲದರಿಂದ ರಕ್ಷಿಸಲ್ಪಡುತ್ತಾನೆ.
ನಾಲ್ಕನೆಯ ಉಪಚಿಕಾ ವಗ್ಗೊ ಮುಗಿಯಿತು (ಇದರಲ್ಲಿ ಹತ್ತು ಪ್ರಶ್ನೆಗಳಿವೆ. 

Milinda panha 11.3. ಪಠವಿ ವಗ್ಗೋ

3. ಪಠವಿ ವಗ್ಗೋ

1. ಪಠವಿಅಂಗ ಪನ್ಹೋ (ಪೃಥ್ವಿ ಪ್ರಶ್ನೆ)


ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಪೃಥ್ವಿಯ 5 ಗುಣಗಳಾವುವು?(236)
ಓ ಮಹಾರಾಜ, ಹೇಗೆ ಪೃಥ್ವಿಯು ತನ್ನಮೇಲೆ ಪ್ರಿಯವಾದ ಅಥವಾ ಅಪ್ರಿಯವಾದ ವಸ್ತುಗಳನ್ನು ಎಸೆದರೂ ಸಹಾ ಅದು ಸಮಾನಭಾವದಿಂದಿರುವುದೋ, ವಿವರವಾಗಿ ಹೇಳುವುದಾದರೆ, ಕಪರ್ೂರ, ಕತ್ತಾಳೆ, ಮಲ್ಲಿಗೆ, ಚಂದನ, ಕೇಸರಿ ಅಥವಾ ಹಾಗೆಯೇ ಕಫ, ಮಲಮೂತ್ರ, ಕೊಬ್ಬು, ಜೊಲ್ಲು, ಬೆವರು, ರಕ್ತ ಇತ್ಯಾದಿ ಎಸೆದರೂ ಸಹಾ ಪೃಥ್ವಿಯು ಸಮಾನಭಾವದಿಂದಲೇ ಇರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲತೆಯಲ್ಲಿ ನಿಷ್ಠನಾಗಿ ಸಮಚಿತ್ತತೆಯಲ್ಲಿ ಸ್ಥಿರವಾಗಿ, ಅಚಲನಾಗಿ, ಲಾಭ-ನಷ್ಟಗಳಲ್ಲಿ, ಜಯಪರಾಜಯದಲ್ಲಿ ಸ್ತುತಿನಿಂದೆಗಳಲ್ಲಿ, ಸುಖ-ದುಃಖಗಳಲ್ಲಿ ಸಲುಹುವಿಕೆ ಮತ್ತು ನಿರ್ಲಕ್ಷವಿಕೆಯಲ್ಲಿ ಸಮಭಾವದಿಂದಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಯಾವುದೇ ಆಡಂಭರವಿಲ್ಲದೆ, ಹೂಹಾರಗಳಿಲ್ಲದ, ತನ್ನದೇ ಆದಂತಹ ನಿರಾಭರಣ ಸೌಂದರ್ಯದ ಸಹಜ ಸುವಾಸನೆಯಲ್ಲಿರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಪ್ರಯತ್ನದಲ್ಲಿ ನಿಷ್ಠನಾಗಿ, ಯಾವುದೇ ಆಡಂಬರ, ಆಭರಣವಿಲ್ಲದೆ, ಸರಳವಾಗಿ, ಸತ್ಯತೆಯ ಸವಿಯಿಂದ ಕೂಡಿ ಚಲಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಘನವೋ, ಯಾವುದೇ ರಂಧ್ರಗಳಿಲ್ಲದೆ, ಬಿರುಕುಗಳಿಲ್ಲದೆ, ಮಂದವಾಗಿ, ದಟ್ಟವಾಗಿ ಪ್ರತಿಯೊಂದು ಕಡೆಯಲ್ಲು ಹರಡಿದೆಯೋ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಅಛಿದ್ರ ಶೀಲದಿಂದ, ಅಭಂಗ ಶೀಲದಿಂದ, ಗಾಢವಾದ ಶೀಲದಿಂದ, ವಿಸ್ತಾರ ಶೀಲದಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ 3ನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಎಂದಿಗೂ ಶಿಥಿಲವಾಗದೋ, ಅದು ತನ್ನಲ್ಲಿ ಹಳ್ಳಿಗಳು, ನಗರಗಳು, ಗಿಡಮರಗಳು, ಬೆಟ್ಟಗುಡ್ಡಗಳು, ನದಿ ಕೆರೆಗಳು, ಪ್ರಾಣಿ ಪಕ್ಷಿಗಳು, ಸ್ತ್ರೀಪುರುಷರ ಸಮೂಹಗಳಿಂದ ಕೂಡಿದ್ದರೂ ಸಹಾ ಅದು ಎಂದಿಗೂ ಬಳಲಿಕೆಪಡದು. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ತನ್ನ ಪ್ರಯತ್ನಶೀಲತೆಯಲ್ಲಿ ದೃಢವಾಗಿ, ಎಂದಿಗೂ ಬಳಲಿಕೆ ಪಡುವುದಿಲ್ಲ, ಬೇಸರಪಡುವುದಿಲ್ಲ, ಹೇಗೆಂದರೆ, ಬೋಧಿಸುವಿಕೆಯಲ್ಲಿ, ಉಪದೇಶಿಸುವಿಕೆ, ವಿದ್ಯಾಭ್ಯಾಸದಲ್ಲಿ, ಗೌರವಿಸುವಿಕೆಯಲ್ಲಿ, ಸ್ಫೂತರ್ಿ ನೀಡುವಿಕೆಯಲ್ಲಿ, ಅನಂದಿಸುವಿಕೆಯಲ್ಲಿ ಇತ್ಯಾದಿಗಳಲ್ಲಿ ಆತನು ಬೇಸರ ಹಾಗು ಬಳಲಿಕೆ ತಾಳುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪೃಥ್ವಿಯು ಅನುನಯ (ಪ್ರೀತಿ) ದಿಂದ, ಅಥವಾ ದ್ವೇಷದಿಂದಾಗಲಿ ಮುಕ್ತವಾಗಿರುವುದೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಲ್ಲಿ ನಿಷ್ಠನಾಗಿ, ಉತ್ಸಾಹಿತನಾಗಿ, ಪೃಥ್ವಿಯಂತೆ ಯಾರಲ್ಲಿಯೂ, ಯಾವ ವ್ಯಕ್ತಿಯಲ್ಲೂ ಪ್ರೀತಿಯಾಗಲಿ ಅಥವಾ ದ್ವೇಷವಾಗಲಿ ತಾಳದೆ ಅವುಗಳಿಂದ ಮುಕ್ತನಾಗಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪೃಥ್ವಿಯ ಐದನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಶ್ರದ್ಧಾವಂತೆಯಾದ ಚುಲ್ಲ ಸುಭದ್ರೆಯು ಹೀಗೆ ಹೇಳಿದ್ದಾಳೆ:
ಒಬ್ಬನು ಕೊಡಲಿಯಿಂದ ಒಂದು ಕೈ ಕತ್ತರಿಸಿದರೂ, ಇನ್ನೊಬ್ಬನು ವಾತ್ಸಲ್ಪದಿಂದ ಮಧುರ ಸುಗಂಧವನ್ನು ಲೇಪಿಸಿದರೂ, ಯಾರಲ್ಲಿಯೂ ದ್ವೇಷವಾಗಲಿ ಅಥವಾ ಪ್ರೀತಿಯಾಗಲಿ ತಾಳದೆ ಪೃಥ್ವಿಯಂತೆ ಅಚಲರಾಗಿ ನನ್ನ ಭಿಕ್ಷುಗಳ ಹೃದಯವಿರುತ್ತದೆ.

2. ಅಪಂಗ ಪನ್ಹೊ (ಜಲದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಜಲದ ಐದು ಗುಣ
ಗಳಾವುವು? (237)
ಓ ಮಹಾರಾಜ, ಹೇಗೆ ಜಲವು (ಬಾವಿ ಕೆರೆಗಳಲ್ಲಿ) ಸ್ಥಿರವಾಗಿ, ಅಚಲವಾಗಿ ಇರುವುದೋ ಮತ್ತು ಕ್ಷೊಭೆಗೊಳ್ಳುವುದಿಲ್ಲವೋ ಮತ್ತು ಪರಿಶುದ್ಧವಾಗಿಯೇ ಇರುತ್ತದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಲ್ಲಿ ನಿಷ್ಠನಾಗಿ, ಕುಹಕತೆಯಿಂದ ಮತ್ತು ಕ್ಲೇಷದಿಂದ ದೂರನಾಗಿ, ಬಯಕೆಗಳ ಸಾಮಿಪ್ಯದಿಂದಲೂ, ಕೆಟ್ಟ ಎಲ್ಲಾರೀತಿಯ ಪ್ರಭಾವಗಳಿಗೂ ಒಳಗಾಗದೆ, ಪರಿಶುದ್ಧ ಸ್ವಾಭಾವದಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಜಲದ ಪ್ರಥಮ ಗುಣವಾಗಿದೆ
ಮತ್ತೆ ಓ ಮಹಾರಾಜ, ಜಲವು ಸದಾ ಶೀತಲವಾದ ಪುನಃ ಉಲ್ಲಾಸಕಾರಿಯಾದ ಸ್ವಭಾವದ್ದಾಗಿದೆಯೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಸರ್ವಜೀವಿಗಳಲ್ಲಿ ಕ್ಷಮಾಶೀಲನಾಗಿ, ಮೈತ್ರಿ, ದಯಾಸಂಪನ್ನನಾಗಿ, ಹಿತವಾದ ಅನುಕಂಪ ತಾಳಿ ಅದನ್ನೇ ಗಾಢವಾಗಿ, ಸರ್ವಜೀವಿಗಳಲ್ಲೂ ಪ್ರಸರಿಸುತ್ತಾನೋ, ಇದೇ ಓ ಮಹಾರಾಜ, ಭಿಕ್ಷುವು ಹೊಂದಿರುವ ಜಲದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಜಲವು ಕೊಳೆಯನ್ನು ಶುದ್ಧಗೊಳಿಸುವುದೋ, ಹಾಗೆಯೇ ಧ್ಯಾನಶೀಲ ಭಿಕ್ಷುವು, ಪರಿಶ್ರಮಭರಿತನಾಗಿ, ಆತನು ಎಲ್ಲೇ ಇರಲಿ, ಅದು ಹಳ್ಳಿಯಾಗಿರಲಿ, ಅರಣ್ಯವಾಗಿರಲಿ, ಅಲ್ಲಿ ಕಲಹಗಳಿಲ್ಲದೆ, ತಪ್ಪುಗಳಿಲ್ಲದೆ, ಗುರುಹಿರಿಯರೊಂದಿಗೆ ವಿನೀತನಾಗಿರುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಿರುವ ಜಲದಲ್ಲಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಜಲವೂ ಎಲ್ಲಾ ಜೀವಿಗಳಿಗೂ ಇಷ್ಟವೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ನಿಷ್ಠನಾಗಿ, ಅಲ್ಪೇಚ್ಛೆಯುಳ್ಳವನಾಗಿ, ಸಂತುಷ್ಟನಾಗಿ ಏಕಾಂತತೆಯಲ್ಲಿ ನಿರತನಾಗಿ, ಹೀಗೆ ಆತನು ಎಲ್ಲಾ ಲೋಕಗಳಿಂದಲೂ ಇಷ್ಟಪಡುವವನಾಗುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಿರುವ ಜಲದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಜಲವು ಮಾನವನಿಗೆ ಯಾವ ಹಾನಿಯು ಮಾಡದೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಯಾರಿಗೂ ಹಾನಿ ಮಾಡದೆ, ವಾಚಾದಿಂದ ಆಗಲಿ, ಕರ್ಮದಿಂದಾಗಲಿ, ಮನಸ್ಸಿನಿಂದ ಆಗಲಿ ಯಾವುದೇ ಹಾನಿ ಮಾಡುವುದಿಲ್ಲ. ಪರರಲ್ಲಿ ಜಗಳ, ವಿವಾದ, ಅತೃಪ್ತಿ, ಕೋಪ, ಹಿಂಸೆ, ಆಗುವಂತಹುದು ಯಾವುದು ಆತನು ಮಾಡುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಜಲದಲ್ಲಿರುವ ಐದನೆಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಕಣ್ಹಾ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಸರ್ವಜೀವಿಗಳಿಗೆ ನಾಯಕನಾದ ಓ ಸಕ್ಕ, ನೀನು ನನಗೆ ವರವನ್ನೇ ನೀಡುವುದಾದರೆ ನನ್ನಿಂದ ಯಾರಿಗೂ, ಎಲ್ಲಿಯೂ, ಯಾವಾಗಲೂ ಕಾಯ, ವಾಚಾ, ಮನಸ್ಸಿನಿಂದ ಹಾನಿಯಾಗದಿರಲಿ, ಇದನ್ನೇ ಓ ಸಕ್ಕ ವರಗಳ ವರವಾಗಿ ನಾನು ಆಯ್ಕೆ ಮಾಡುವೆ.

3. ತೇಜಂಗ ಪನ್ಹೊ (ಅಗ್ನಿಯ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಅಗ್ನಿಯ 5 ಗುಣಗಳು
ಯಾವುವು? (238)
ಓ ಮಹಾರಾಜ ಹೇಗೆ ಅಗ್ನಿಯು ಹುಲ್ಲನ್ನು, ಕಡ್ಡಿಗಳನ್ನು, ಕೊಂಬೆಗಳನ್ನು ಮತ್ತು ಎಲೆಗಳನ್ನು ಸುಡುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಲ್ಲಿ ನಿಷ್ಠನಾಗಿ, ತನ್ನ ಪ್ರಜ್ಞೆಯ ಅಗ್ನಿಯಿಂದ ಆಂತರಿಕ ಅಥವಾ ಬಾಹ್ಯದ ಎಲ್ಲಾ ಕ್ಲೇಷಗಳನ್ನು ನಾಶಗೊಳಿಸುತ್ತಾನೆ. ಆತನು ಚಿತ್ತಗೋಚರ ವಸ್ತುಗಳಾಗಲಿ, ಕತರ್ೃಸಂಬಂಧದ್ದೇ ಆಗಲಿ, ಇಷ್ಟವಿರುವ ವಿಷಯಗಳಾಗಲಿ, ಅನಿಷ್ಟ ವಿಷಯಗಳೇ ಆಗಲಿ, ಎಲ್ಲವನ್ನೂ ಸುಟ್ಟುಹಾಕುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಅಗ್ನಿಯ ಮೊದಲ ಗುಣವಾಗಿದೆ.
ಮತ್ತೆ ಓ ರಾಜ, ಅಗ್ನಿಗೆ ಯಾವುದೇ ಕರುಣೆ, ಅನುಕಂಪವಿರುವುದಿಲ್ಲ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಕ್ಲೇಷಗಳಲ್ಲಿ ಯಾವುದೇ ದಯೆ ತೋರಿಸುವುದಿಲ್ಲ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಅಗ್ನಿಯು ಶೀತವನ್ನು ನಾಶಗೊಳಿಸುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪರಿಶ್ರಮ ಪರಾಕ್ರಮದಿಂದ ಉತ್ಸಾಹದಿಂದ ಕ್ಲೇಷಗಳನ್ನು ನಾಶಗೊಳಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಅಗ್ನಿಯ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಅಗ್ನಿಯು ಯಾವ ವ್ಯಕ್ತಿಯ ಮೇಲೂ ಕೃಪೆಯಾಗಲಿ ಅಥವಾ ದ್ವೇಷವಾಗಲಿ ತಾಳದೆ ಎಲ್ಲರಿಗೂ ಸಮವಾಗಿ ತಾಪವನ್ನು ನೀಡುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಅಗ್ನಿಯಂತೆ ಉತ್ಸಾಹಿತನಾಗಿ ಯಾರಲ್ಲೂ ಪ್ರಿಯಭಾವನೆ ಅಥವಾ ಅಪ್ರಿಯಭಾವನೆ ತಾಳದೆ ಚಿತ್ತ ಉಪೇಕ್ಷೆಯಿಂದಿರುತ್ತಾನೆ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಅಗ್ನಿಯ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಅಗ್ನಿಯು ಕತ್ತಲೆಯನ್ನು ದೂರೀಕರಿಸುವುದೋ ಮತ್ತು ಹೊಂಬೆಳಕನ್ನು ನೀಡುತ್ತದೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಅಜ್ಞಾನದ ಅಂಧಕಾರವನ್ನು ದೂರೀಕರಿಸಿ, ಜ್ಞಾನದ ಬೆಳಕನ್ನು ಪ್ರಕಾಶಿಸುವಂತೆ ಮಾಡುತ್ತಾನೆ. ಇದೇ ಮಹಾರಾಜ, ಭಿಕ್ಷು ಹೊಂದಬೇಕಾದ ಅಗ್ನಿಯ ಐದನೆಯ ಗುಣವಾಗಿದೆ.
ಓ ಮಹಾರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ರಾಹುಲನಿಗೆ ಹೀಗೆ ಬೋಧಿಸಿದ್ದಾರೆ: ನೀನೇ ಅಭ್ಯಾಸಿಸು ರಾಹುಲ, ಆ ಧ್ಯಾನದಲ್ಲಿ ಅಗ್ನಿಯಂತೆ ವಿಜೃಂಭಿಸು, ಅದರಿಂದಾಗಿ ಇರುವ ಎಲ್ಲಾ ಕ್ಲೇಷಗಳು ನಾಶವಾಗಿ, ಹೊಸತು ಉಂಟಾಗದಿರಲಿ.

4. ವಾತಂಗ ಪನ್ಹೋ (ವಾಯು ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ವಾಯುವಿನ ಯಾವ ಐದು ಗುಣಗಳನ್ನು ಹೊಂದಬೇಕು? (239)
ಓ ಮಹಾರಾಜ, ಹೇಗೆ ವಾಯು ಆಕಾಶದಲ್ಲಿ, ಕಾಡಿನಲ್ಲಿ ಮತ್ತು ತೋಪುಗಳಲ್ಲಿ, ಹೂಬಿಡುವ ಕಾಲದಲ್ಲಿ ಹಬ್ಬುತ್ತದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಧ್ಯಾನಗಳ ತೋಪಿನಲ್ಲಿ ಆನಂದಿಸಿದಾಗ ವಿಮುಕ್ತಿಯ ಹೂಗಳು ಅರಳುತ್ತವೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ವಾಯುವಿನ ಪ್ರಥಮ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ವಾಯು ಭೂಮಿಯಲ್ಲಿ ಬೆಳೆದಿರುವ ಎಲ್ಲಾ ಮರಗಳನ್ನು ಜೋರಾಗಿ ಕಲಕುವಂತೆ ಮಾಡುತ್ತದೋ ಮತ್ತು ಅವುಗಳನ್ನು ಬಾಗುವಂತೆ ಮಾಡುತ್ತದೋ ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲನಾಗಿ, ಕಾಡಿನ ಮಧ್ಯೆ ಧ್ಯಾನಮಗ್ನನಾಗಿ, ಸಂಖಾರಗಳ ನಿಜಸ್ವರೂಪವನ್ನು ಅರಿಯುತ್ತ ಕ್ಲೇಷಗಳನ್ನು ನಾಶಗೊಳಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ವಾಯುವಿನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ವಾಯುವು ಆಕಾಶದಲ್ಲಿ ಅಡ್ಡಾಡುತ್ತದೆಯೋ ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ನಿಷ್ಠನಾಗಿ, ತನ್ನ ಚಿತ್ತವನ್ನು ಲೋಕೋತ್ತರ ವಿಷಯಗಳಲ್ಲಿ ಅಡ್ಡಾಡುವಂತೆ ಪಳಗಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ವಾಯುವಿನ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ವಾಯುವು ಸುಗಂಧವನ್ನು ಜೊತೆಗೆ ತೆಗೆದುಕೊಂಡು ಹೋಗುವುದೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ತನ್ನೊಂದಿಗೆ ಸದಾ ಶೀಲವಂತಿಕೆಯ ಸುಗಂಧವನ್ನು ಪ್ರಸರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ವಾಯುವಿಗೆ ವಾಸಿಸಲು ಮನೆಯಿಲ್ಲವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವಿಗೆ ಸಹಾ ಯಾವುದೇ ಮನೆಯಿಲ್ಲದೆ ಅನಿಕಿತನವಾಗಿ, ಸಮಾಜಕ್ಕೆ ಅಂಟದೆ, ಚಿತ್ತಮುಕ್ತನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಐದನೇ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಸುತ್ತನಿಪಾತದಲ್ಲಿ ಹೀಗೆ ಹೇಳಿದ್ದಾರೆ:
ಸ್ನೇಹದಿಂದ ಭಯವು ಉಂಟಾಗುತ್ತದೆ, ಗೃಹಜೀವನದಿಂದ ರಜವು ಹುಟ್ಟುತ್ತದೆ. ಸ್ನೇಹ ಮತ್ತು ಮನೆಯ ಜೀವನದಿಂದ ಮುಕ್ತತೆಯೇ ಮುನಿದರ್ಶನವಾಗಿದೆ.

5. ಪಬ್ಬತಂಗ ಪನ್ಹೊ (ಪರ್ವತದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಪರ್ವತದ 5 ಗುಣಗಳು
ಯಾವುವು? (240)
ಓ ಮಹಾರಾಜ, ಹೇಗೆ ಪರ್ವತವು ದೃಢವೋ, ಅಚಲವೋ, ಅಕಂಪನವೋ ಅದೇರೀತಿ ಧ್ಯಾನಶೀಲ ಭಿಕ್ಷುವು ಪರಿಶ್ರಮಯುತನಾಗಿ, ಆಮಿಷಗೊಳಪಡಿಸುವ ದೃಶ್ಯ, ಶಬ್ದ, ವಾಸನೆ, ರಸ, ಸ್ಪರ್ಶಗಳಿಂದಾಗಿ ಉದ್ರೇಕ ತಾಳುವುದಿಲ್ಲ. ಹಾಗೆಯೇ ಗೌರವ, ಉದ್ವೇಗದ ಸನ್ನಿವೇಶ, ಪೋಷಣೆ, ಅಲಕ್ಷ, ಅಗೌರವ, ಕೀತರ್ಿ, ಅಪಕೀತರ್ಿ, ಸ್ತುತಿ, ನಿಂದೆ, ಇದ್ಯಾವುದರಿಮದ ಕ್ಷೊಭೆಗೆ ಒಳಗಾಗುವುದಿಲ್ಲ. ಹಾಗೆಯೇ ತಪ್ಪು ಅಥವಾ ಅಸಂತೋಷ ತರುವಂತಹ ವಸ್ತುಗಳಿಂದಾಗಲಿ ಅಥವಾ ಸನ್ನಿವೇಶಗಳಿಂದ ಉದ್ವೇಗ ತಾಳುವುದಿಲ್ಲ, ಕುಪಿತನು ಆಗುವುದಿಲ್ಲ, ಪರ್ವತದ ಹಾಗೆ ದೃಢನಾಗಿರುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಪರ್ವತದ ಪ್ರಥಮ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಹೇಗೆ ಶಿಲೆಯು (ಹೆಬ್ಬಂಡೆಯು) ವಾಯುವಿನಿಂದ ಅಲುಗಾಡುವುದಿಲ್ಲವೋ ಹಾಗೆಯೇ ನಿಂದಾ ಪ್ರಶಂಸೆಗಳಿಂದ ಪಂಡಿತರು ವಿಚಲಿತರಾಗುವುದಿಲ್ಲ.
ಮತ್ತೆ ಓ ಮಹಾರಾಜ, ಹೇಗೆ ಪರ್ವತವು ದೃಢವಾಗಿರುವುದೋ ಪರವಸ್ತುಗಳಿಂದ ಅಮಿಶ್ರಿತವೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪರಿಶ್ರಮಯುತನಾಗಿ ದೃಢನಾಗಿ, ಸ್ವತಂತ್ರನಾಗಿ, ಯಾರೊಂದಿಗೂ ಬೆರೆಯುವುದಿಲ್ಲ. ಇದೇ ಓ ಮಹಾರಾಜ, ಪರ್ವತದ ದ್ವಿತೀಯ ಗುಣವು ಭಿಕ್ಷುವು ಹೊಂದಬೇಕಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಯಾರು ಗೃಹಸ್ಥರೊಂದಿಗೆ ಅಥವಾ ಸಮಣರೊಂದಿಗೆ ಬೆರೆಯುವುದಿಲ್ಲವೋ, ಒಂಟಿಯಾಗಿಯೇ ಚಲಿಸುವರೋ, ಅನಿಕೇತನನಾಗಿ, ಅಲ್ಪೇಚ್ಛೆಯುಳ್ಳವರಾಗಿರುವರೋ ಅವರನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
ಮತ್ತೆ ಓ ಮಹಾರಾಜ, ಹೇಗೆ ಪರ್ವತದಲ್ಲಿ ಬೀಜವು ಮೊಳಕೆ ಒಡೆಯುವುದಿಲ್ಲವೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಿಂದ ಕೂಡಿದವನಾಗಿ, ತನ್ನ ಚಿತ್ತದಲ್ಲಿ ಕ್ಲೇಷಗಳು ಉತ್ಪನ್ನವಾಗಲು ಬಿಡುವುದಿಲ್ಲ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಪರ್ವತದ ತೃತೀಯ ಗುಣವಾಗಿದೆ. ಇದರ ಬಗ್ಗೆ ಓ ರಾಜ, ಥೇರ ಸುಭೂತಿಯು ಹೀಗೆ ಹೇಳಿದ್ದಾರೆ:
ಯಾವಾಗ ರಾಗಯುತ ಯೋಚನೆಗಳು ನನ್ನ ಚಿತ್ತದಲ್ಲಿ ಉದಯಿಸುತ್ತದೋ ಆಗಲೇ ಅದನ್ನು ಪರೀಕ್ಷಿಸಿ ಅದನ್ನು ಧಮಿಸುತ್ತೇನೆ. ಯಾರು ರಜಸ್ಸಿನಿಂದ, ಉದ್ರೇಕಿತರಾಗುತ್ತಾರೋ, ವಿರೋಧದಿಂದ ದ್ವೇಷಿಸುತ್ತಾರೋ, ಮೋಹದಿಂದಾಗಿ ಮೂಢರಾಗುತ್ತಾರೋ ಅಂತಹವರು ತೊರೆದು ವನಕ್ಕೆ ಹೋಗಲಿ, ಅವರ ವಾಸಸ್ಥಳವು ವಿಶುದ್ಧವಾದುದು, ತಪಸ್ಸಿನ ಜೀವನವು ನಿರ್ಮಲವಾದುದು, ವಿಶುದ್ಧತೆಗೆ ದೋಷತರದೆ, ತೊರೆದು ವನಕ್ಕೆ ತೆರಳಲಿ.
ಮತ್ತೆ ಹೇಗೆ ಪರ್ವತವು ಉಚ್ಛಮಟ್ಟದಲ್ಲಿ ಬೆಳೆಯುತ್ತದೋ ಅದೇರೀತಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲನಾಗಿ, ಜ್ಞಾನದ ಬಲದಿಂದಾಗಿ ಉನ್ನತಮಟ್ಟದಲ್ಲಿ ಬೆಳೆಯುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾಲ್ಕನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಪ್ರಮಾದವನ್ನು (ಅಲಕ್ಷವನ್ನು) ಅಪ್ರಮಾದದಿಂದ ಜ್ಞಾನಿಯು ದೂರೀಕರಿಸಿ, ಪ್ರಜ್ಞಾ ಪ್ರಸಾದವನ್ನು ಏರಿ, ಆ ಅಶೋಕನು, ಶೋಕದಿಂದ ಪೀಡಿತರಾಗಿರುವ ಜನರನ್ನು, ಪರ್ವತದ ತುದಿಯೇರಿ, ಕೆಳಭೂಮಿಯಲ್ಲಿರುವಂತಹ ದುಃಖಿತರನ್ನು ಧೀರನು ವೀಕ್ಷಿಸುತ್ತಾನೆ.
ಮತ್ತೆ ಓ ರಾಜ, ಹೇಗೆ ಪರ್ವತವು ಎತ್ತಲಾಗುವುದಿಲ್ಲವೋ ಅಥವಾ ಬಾಗಿಸಲಾರದೋ, ಅದೇರೀತಿಯಲ್ಲಿ ಓ ರಾಜ, ಧ್ಯಾನಶೀಲ ಭಿಕ್ಷುವನ್ನು ಯಾರು ಸ್ತುತಿ ಇತ್ಯಾದಿಗಳಿಂದ ಮೇಲೆತ್ತಲಾರರು. ಹಾಗೆಯೇ ನಿಂದೆ ಇತ್ಯಾದಿಗಳಿಂದ ಕುಗ್ಗಿಸಲಾರರು, ಬಾಗಿಸಲಾರರು, ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಪರ್ವತದ ಐದನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಶ್ರದ್ಧಾಳು ಉಪಾಸಿಕೆಯಂತಹ ಚುಲ್ಲಸುಭದ್ರ ಹೀಗೆ ಹೇಳಿದ್ದಾರೆ:
ಲಾಭದಿಂದ ಲೋಕವು ಉಬ್ಬುವುದು, ಅಲಾಭದಿಂದ ಕುಗ್ಗುವುದು. ಆದರೆ ನನ್ನ ಸಮಣರು ಲಾಭ ಅಲಾಭಗಳನ್ನು ಏಕಸಮವಾಗಿ ಕಂಡು ಸ್ಥಿರವಾಗಿಯೇ ಇರುವರು.


6. ಆಕಾಸಂಗ ಪನ್ಹೋ (ಆಕಾಶದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಆಕಾಶದ ಐದು ಗುಣ 
ಗಳಾವುವು? (241)
ಓ ಮಹಾರಾಜ, ಹೇಗೆ ಆಕಾಶವನ್ನು ಹಿಡಿಯಲಾಗದೋ, ಅಸಾಧ್ಯವೋ, ಅದೇರೀತಿಯಲ್ಲಿ ಓ ರಾಜ, ಧ್ಯಾನಶೀಲ ಭಿಕ್ಷುವನ್ನು ಕ್ಲೇಷಗಳು ಹಿಡಿಯಲಾರವು. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಋಷಿಗಳಿಗೆ, ತಪಸ್ವಿಗಳಿಗೆ, ಯಕ್ಷ ದೇವತೆಗಳಿಗೆ ಮತ್ತು ಪಕ್ಷಿಗಳಿಗೆ ಪ್ರಿಯವಾದ ಆವಾಸ ಸ್ಥಾನವೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷು ಪ್ರಯತ್ನದಲ್ಲಿ ನಿರತನಾಗಿ, ಸಂಖಾರಗಳೆಲ್ಲವೂ ಅನಿತ್ಯ ದುಃಖ, ಅನಾತ್ಮ ಎಂದು ಮಾನಸದಲ್ಲಿ ಸಂಚರಿಸುತ್ತಾನೆ. ಇದೇ ಓ ರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಸಂತಸವನ್ನುಂಟು ಮಾಡುವುದೋ, ಅದೇರೀತಿ ಧ್ಯಾನಶೀಲ ಭಿಕ್ಷುವು, ಧ್ಯಾನದಲ್ಲಿ ಎಲ್ಲಾ ಭವಗಳ, ಪಟಿಸಂಧಿಗಳನ್ನು ವೀಕ್ಷಿಸಿ ಉದ್ವೇಗ ತಾಳುತ್ತಾನೆ, ಭಯ ತಾಳುತ್ತಾನೆ. ನಂತರ ಅದರಲ್ಲಿ ಆನಂದಿಸುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಅನಂತವೋ, ಅಪ್ರಮಾಣವೋ, ಅಪರಿಮಿತವೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಅನಂತ ಶೀಲದಿಂದ, ಅಪರಿಮಿತ ಜ್ಞಾನದಿಂದ ಅಪ್ರಮಾಣ ಧ್ಯಾನದಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಆಕಾಶದ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಆಕಾಶವು ಯಾವುದರಿಂದಲೂ ನೇತಾಡಿ ಕೊಂಡಿಲ್ಲವೋ, ಯಾವುದಕ್ಕೂ ಅಂಟಿಲ್ಲವೋ ಯಾವುದರಿಂದಲೂ ವಿಶ್ರಾಂತಿ ಪಡೆಯುತ್ತಿಲ್ಲವೋ, ಯಾವುದರಿಂದಲೂ ನಿಲ್ಲಿಸಲಾಗುವುದಿಲ್ಲವೋ, ಓ ಮಹಾರಾಜ, ಅದೇರೀತಿ ಧ್ಯಾನಶೀಲ ಭಿಕ್ಷುವು, ಪ್ರಯತ್ನದಲ್ಲಿ ನಿಷ್ಠನಾಗಿ, ಯಾವುದಕ್ಕೂ ಅವಲಂಬಿತನಾಗದೆ, ಯಾವುದಕ್ಕೂ ಅಂಟಿಕೊಳ್ಳದೆ, ಯಾವುದರಲ್ಲೂ ವಿಶ್ರಾಂತಿ (ಆಧಾರ) ಪಡೆಯದೆ, ಯಾವುದರಿಂದಲೂ ತಡೆಯಲ್ಪಡದೆ, ಆತನಿಗೆ ಕುಟುಂಬಗಳು ಆಡಳಿತ ಮಾಡಲಾಗುವುದಿಲ್ಲ. ಅಥವಾ ಶಿಷ್ಯರು ಸಹಾಯಕ್ಕಾಗಲಿ, ಅಥವಾ ದ್ವೇಷಕರಾಗಲಿ ಆತವಾ ವಾಸಸ್ಥಳವಾಗಲಿ, ಅಥವಾ ಪರಿಕರಗಳಾಗಲಿ, ಅಥವಾ ಧಮ್ಮ ಜೀವನದ ತಡೆಗಳಾಗಲಿ, ಅಥವಾ ಯಾವುದೇ ಕ್ಲೇಷಗಳಾಗಲಿ ಇವ್ಯಾವುದೂ ಅತನಿಗೆ ತಡೆಯಾಗಲಿ, ತಡೆಯುವುದಾಗಲಿ ಮಾಡಲಾರದು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಐದನೆಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ಭಗವಾನರು, ದೇವಾದಿದೇವರು ಆಗಿರುವ ಬುದ್ಧರು ರಾಹುಲನಿಗೆ ಬೋಧಿಸುವಾಗ ಹೀಗೆ ನುಡಿದಿದ್ದರು:
ರಾಹುಲ, ಹೇಗೆ ಆಕಾಶವು ಯಾವುದರ ಮೇಲೂ ಯಾವುದರಿಂದಲೂ ಆಧಾರವಾಗಿಲ್ಲವೋ ಹಾಗೆಯೇ ನೀನು ಸಹಾ ಧ್ಯಾನವನ್ನು ಆಕಾಶದಂತೆ ವೃದ್ಧಿಸು. ಆಗ ನಿನ್ನಲ್ಲಿ ಪ್ರಿಯವೇದನೆ ಅಥವಾ ಅಪ್ರಿಯ ವೇದನೆಗಳಾಗಲಿ, ಉದಯಿಸಲಾರವು.

7. ಚಂದಂಗ ಪನ್ಹೋ (ಚಂದಿರನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಚಂದಿರನ ಐದು ಗುಣ
ಗಳಾವುವು? (242)
ಓ ಮಹಾರಾಜ, ಹೇಗೆ ಚಂದಿರನು ಶುಕ್ಲ ಪಕ್ಷದಲ್ಲಿ ಪ್ರಕಾಶಿಸುತ್ತ, ವೃದ್ಧಿಸುತ್ತ ಹೋಗುವನೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಪ್ರಯತ್ನದಲ್ಲಿ ನಿಷ್ಠನಾಗಿ, ಆಚಾರದಲ್ಲಿ, ಶೀಲಾಧಿ ಗುಣಗಳಲ್ಲಿ, ಅನುಷ್ಠಾನದಲ್ಲಿ, ಕರ್ತವ್ಯಪರತೆಯಲ್ಲಿ, ಆಗಮ ಅಧಿಗಮದಲ್ಲಿ, (ಶಾಸ್ತ್ರ ಮತ್ತು ಅಧ್ಯಯನದಲ್ಲಿ) ವಿರಕ್ತಿಯಲ್ಲಿ, ಸ್ಮೃತಿ ಪ್ರತಿಷ್ಠಾನದಲ್ಲಿ, ಇಂದ್ರಿಯಗಳ ದ್ವಾರದಲ್ಲಿ ರಕ್ಷಿತನಾಗಿ, ಮಿತಹಾರಿಯಾಗಿ, ಜಾಗರೂಕನಾಗಿ ಸಾಧನೆ ಮಾಡುವನು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಂದಿರನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಚಂದಿರನು ಉಶಾರಾಧಿಪತಿಯೋ (ಬೃಹತ್ ಅಧಿಪತಿಯೋ) ಅದೇರೀತಿ ಧ್ಯಾನಶೀಲ ಭಿಕ್ಷುವು ಸಹಾ ಪ್ರಯತ್ನದಲ್ಲಿ ನಿಷ್ಠನಾಗಿ ತನ್ನ ಇಚ್ಛೆಯಂತೆ ಮಹಾ ಅಧಿಪತಿ ಆಗಿರುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ದ್ವಿತೀಯ ಗುನವಾಗಿದೆ. ಮತ್ತೆ ಓ ಮಹಾರಾಜ, ಚಂದಿರನು ರಾತ್ರಿಯಲ್ಲಿ ಸಂಚರಿಸುವಂತೆ ಧ್ಯಾನಶೀಲ ಭಿಕ್ಷುವು ನಿಷ್ಠೆಯಿಂದ ಏಕಾಂತದಲ್ಲಿ ತಲ್ಲೀನನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಚಂದಿರನು ವಿಮಾನ ಕೇತುವನ್ನು ಹೊಂದಿದ್ದಾನೆಯೋ (ಎತ್ತರದ ನಿವಾಸದ ಎತ್ತರಕ್ಕೆ ಧ್ವಜವನ್ನು ಹೊಂದಿರುವನೋ) ಅದೇರೀತಿ ಓ ರಾಜ, ಧ್ಯಾನಶೀಲ ಭಿಕ್ಷುವು ಶೀಲವನ್ನು ವೃದ್ಧಿಸಿ ಪತಾಕೆ ಹಾರಿಸುತ್ತಾನೆ, ಪ್ರಯತ್ನದಲ್ಲಿ ನಿಷ್ಠನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಂದಿರನ ನಾಲ್ಕನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಚಂದಿರನು ಕೇಳಿಕೊಂಡಾಗ, ಪ್ರಾಥರ್ಿಸಿದಾಗ ಮೇಲೆ ಏರುವನೋ ಹಾಗೆಯೇ ಧ್ಯಾನಶೀಲ ಪರಾಕ್ರಮಿ ಭಿಕ್ಷುವಿಗೆ ಆಗಾಗ್ಗೆ ಕುಟುಂಬದವರು ಕೇಳಿಕೊಂಡಾಗ ಅವರಲ್ಲಿ ಆತಿಥ್ಯ ಸ್ವೀಕರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಂದಿರನ ಐದನೆಯ ಗುಣವಾಗಿದೆ ಮತ್ತು ಇದರ ಬಗ್ಗೆ ಓ ಮಹಾರಾಜ, ದೇವಾಧಿದೇವರು ಭಗವಾನರು ಸಂಯುಕ್ತ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ಓ ಭಿಕ್ಷುಗಳೇ, ಚಂದಿರನಂತೆ ಆಗಾಗ್ಗೆ ಗೃಹಸ್ಥರಲ್ಲಿ ಭೇಟಿನೀಡಿ, ಆದರೆ ಹಿಮ್ಮುಖವಾಗಿ ಎಳೆದಂತೆ, ಬಾಹ್ಯದಿಂದ ಅಪರಿಚಿತರಂತೆ ಅವರಿಂದ ನಿವೃತ್ತಿ ತಾಳಿ. ಹೇಗೆ ಬಾವಿಯನ್ನು ಅಥವಾ ಪರ್ವತದಿಂದ ಕೆಳ ನೋಡುವಾಗ, ಪ್ರವಾಹವನ್ನು ನೋಡುವಾಗ ಹೇಗೆ ಹಿಂದಕ್ಕೆ ಸರಿಯುವರೋ ಹಾಗೆ ಗೃಹಸ್ಥರಿಂದ ಹಿಂದಕ್ಕೆ ಸರಿಯಿರಿ.

8. ಸೂರಿಯಂಗ ಪನ್ಹೋ (ಸೂರ್ಯನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಸೂರ್ಯನ 7 ಗುಣಗಳಾವುವು?(243)
ಓ ಮಹಾರಾಜ, ಹೇಗೆ ಸೂರ್ಯನು ನೀರನ್ನೆಲ್ಲಾ ಆವಿಯಾಗಿಸುವನೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಪರಿಶ್ರಮಬದ್ಧನಾಗಿ, ತನ್ನಲ್ಲಿರುವ ಎಲ್ಲಾ ಕ್ಲೇಷಗಳನ್ನು ನಿಶ್ಶೇಷವಾಗಿ ಇಲ್ಲದಂತೆ ಮಾಡಲು ಕಾರಣಕರ್ತನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸೂರ್ಯನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನು ಅಂಧಕಾರವನ್ನು ದೂರೀಕರಿಸುವನೋ ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು, ಪ್ರಯತ್ನಶೀಲವಾಗಿ, ತನ್ನೆಲ್ಲಾ ರಾಗವನ್ನು, ದ್ವೇಷವನ್ನು, ಮೋಹವನ್ನು, ಅಹಂಕಾರವನ್ನು, ದಿಟ್ಟಿಯನ್ನು (ಮಿಥ್ಯಾದೃಷಿ), ಕ್ಲೇಷಗಳನ್ನು ಸರ್ವ ದುಶ್ಚರಿತೆಯನ್ನು ದೂರೀಕರಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸೂರ್ಯನ ದ್ವಿತೀಯ ಗುಣವಾಗಿದೆ.
ಮತೆ ಓ ಮಹಾರಾಜ, ಹೇಗೆ ಸೂರ್ಯನು ಸದಾ ಚಲಿಸುತ್ತಿರುತ್ತಾನೋ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು ಸದಾ ಯತ್ನಶೀಲನಾಗಿ, ಯೋಗ್ಯವಾದ, ಜ್ಞಾನೋಚಿತ ಗಮನಹರಿಸುವವನಾಗಿ ಸದಾ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸೂರ್ಯನ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಸೂರ್ಯನು ಪ್ರಭಾಶೀಲ ಕಿರಣಗಳಿಂದ ಕೂಡಿರುತ್ತಾನೆ. ಹಾಗೆಯೇ ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ ಧ್ಯಾನದಿಂದ ಉದಯಿಸಿದ ಪ್ರಭಾಕಿರಣಗಳಿಂದ ಕೂಡಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸೂರ್ಯನ ಚತುರ್ಥ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನು ಸಕಲ ಜೀವರಾಶಿಗಳಿಗೆ ತಾಪವನ್ನುಂಟು ಮಾಡುವನೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನ ಸದಾಚಾರದಿಂದ, ಶೀಲಾದಿ ಗುಣಗಳಿಂದ, ಜ್ಞಾನ ಅನುಷ್ಠಾನದಿಂದ, ಜ್ಞಾನದಿಂದ, ವಿಮೋಕ್ಷದಿಂದ, ಸಮಾಧಿ ಸಮಾಪತ್ತಿ, ಇಂದ್ರೀಯ, ಬಲ, ಬೋಧಿಅಂಗ, ಸತಿಪಟ್ಠಾನ, ಸಮ್ಮಾಪದಾನ, ಇದ್ದಿಪಾದಗಳಿಂದಾಗಿ ಸಕಲ ದೇವಲೋಕ, ಸರ್ವಲೋಕಗಳಿಗೂ, ಶಾಂತಿ, ಆನಂದ, ಸ್ಪೂತರ್ಿ ನೀಡುವವರಾಗಿದ್ದಾರೆ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸೂರ್ಯನ ಪಂಚಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನಿಗೆ ಗ್ರಹಣಗಳ ಭಯ ಕಾಡುವುದೋ ಹಾಗೆಯೇ ಓ ರಾಜ, ಧ್ಯಾನಶೀಲ ಭಿಕ್ಷುವು ಸಹಾ ದುಶ್ಚರಿತೆಗೆ, ದುರ್ಗತಿಗೆ, ವಿಷಮ  ಕರ್ಮ ವಿಪಾಕ (ಫಲಕ್ಕೆ)ಕ್ಕೆ ವಿನಿಪಾತಕ್ಕೆ, ಕ್ಲೇಷಜಾಲಕ್ಕೆ, ದೃಷ್ಟಿಗೆ, ಕುಪಥಕ್ಕೆ, ಕುಮಾರ್ಗಕ್ಕೆ, ನರಕಗಳಿಗೆ, ಹೀನವಾದ ಜನ್ಮಗಳಿಗೆ, ಜನ್ಮಗಳಿಗೆ ಭೀತನಾಗುತ್ತಾನೆ, ಸಂವೇಗ ತಾಳುತ್ತಾನೆ, ಭಯಪಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸೂರ್ಯನ ಆರನೆಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸೂರ್ಯನು ಕಲ್ಯಾಣ ಚರಿತ್ರರಿಗೂ ಹಾಗು ಪಾಪಿಗಳಿಗೂ ಸ್ಪಷ್ಟವಾಗಿ ವ್ಯಕ್ತವಾಗುವನೋ, ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಪ್ರಯತ್ನದಿಂದ ಕೂಡಿ, ಇಂದ್ರೀಯಗಳನ್ನು, ಬಲಗಳನ್ನು, ಬೋಧಿ ಅಂಗಗಳನ್ನು, ಸ್ಮೃತಿ ಪ್ರತಿಷ್ಠಾನಗಳನ್ನು, ಯೋಗ್ಯ ಪ್ರಯತ್ನಗಳನ್ನು, ಇದ್ದಿಪಾದಗಳನ್ನು, ಲೋಕಿಯ ಧಮ್ಮಗಳನ್ನು, ಲೋಕೋತ್ತರ ಧಮ್ಮಗಳನ್ನು ಸರ್ವರಿಗೂ ಉಪದೇಶಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ 7ನೆಯ ಅಂಗವಾಗಿದೆ. ಇದರ ಬಗ್ಗೆ ವಂಗೀಸ ಥೇರರು ಹೀಗೆ ಹೇಳಿದ್ದಾರೆ:
ಹೇಗೆ ಸೂರ್ಯನು ಉದಯಿಸುವನೋ, ಪ್ರಾಣಿಗಳಿಗೆ ರೂಪ ದಶರ್ಿಸಲು ಅವಕಾಶ ನೀಡುತ್ತಾನೆ, ಶುದ್ಧ, ಅಶುದ್ಧ ಆಕಾರಗಳಿಗೂ, ಕುಶಲ ಮತ್ತು ಅಕುಶಲ ಆಕಾರಗಳಿಗೂ ಕಾಣುವಂತೆ ಮಾಡುತ್ತಾರೆ. ಅದೇರೀತಿಯಲ್ಲಿ ಭಿಕ್ಷುವು ಧಮ್ಮಧರನು ಅವಿದ್ಯೆಯಿಂದ ಅಂಧರಾದ ಜನರಿಗೆ ಉದಾತ್ತ ಪಥದ ಜ್ಞಾನ ಮತ್ತು ಶಾಂತಿಯ ವಿವಿಧ ಭಾಗಗಳನ್ನು ದಶರ್ಿಸುವಂತೆ ಮಾಡುವನು.

9. ಸಕ್ಕಂಗ ಪನ್ಹೋ (ಸಕ್ಕ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಸಕ್ಕನ ಮೂರು ಗುಣಗಳಾವುವು?(244)
ಓ ಮಹಾರಾಜ, ಹೇಗೆ ಸಕ್ಕನು ಏಕಾಂತ ಸುಖದಲ್ಲಿ (ದಿವ್ಯ ಆನಂದದಲ್ಲಿ) ಸಮಪರ್ಿತನಾಗಿರುವನೋ ಹಾಗೆಯೇ ಧ್ಯಾನಶೀಲ ಭಿಕ್ಷುವು ಏಕಾಂತದಲ್ಲಿ ಧ್ಯಾನಸುಖ ವೃದ್ಧಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಕ್ಕನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಯಾವಾಗ ಸಕ್ಕನು ತನ್ನ ಸುತ್ತಲು ದೇವತೆಗಳು ಇರುವಾಗ, ಅವರಿಗೆ ಅನುಗ್ರಹ ತೋರಿಸಿ ಅವರಲ್ಲಿ ಆನಂದ ತುಂಬಿಸುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಯತ್ನಶೀಲನಾಗಿ ತನ್ನ ಚಿತ್ತವನ್ನು ವಿರಾಗಯುತವಾಗಿ, ಜಾಗೃತವಾಗಿ, ಪ್ರಶಾಂತವಾಗಿ ಆನಂದ ಉಕ್ಕಿಸುತ್ತಾನೆ. ಕುಶಲ ಧಮ್ಮಗಳಲ್ಲಿ ಈ ರೀತಿಯಾಗಿ ವಿಕಾಸಗೊಳಿಸಿ ಶ್ರಮಪಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಸಕ್ಕನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಸಕ್ಕನು ಎಂದಿಗೂ ಅಸಂತೃಪ್ತಿಯನ್ನು ವ್ಯಕ್ತಪಡಿಸುವುದಿಲ್ಲ. ಅದೇರೀತಿಯಲ್ಲಿ ಧ್ಯಾನಶೀಲನಾದ ಭಿಕ್ಷುವು ಯತ್ನಶೀಲತೆಯಲ್ಲಿ ನಿರತನಾಗಿ, ಏಕಾಂತತೆಯಲ್ಲಿ ಎಂದಿಗೂ ಅಸಮಾಧಾನ ತಾಳುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಸಕ್ಕನ ತೃತೀಯ ಗುಣವಾಗಿದೆ. ಇದರ ಬಗ್ಗೆ ಪೂಜ್ಯ ಥೇರ ಸುಭೂತಿಯವರು ಹೀಗೆ ಹೇಳಿದ್ದಾರೆ:
ಮಹಾವೀರರ ಶಾಸನದಲ್ಲಿ ಎಂದು ನಾನು ಪಬ್ಬಜಿತನಾದೆನೋ ಅಂದಿನಿಂದ ನನ್ನಲ್ಲಿ ಯಾವುದೇ ಕಾಮವು ಉಂಟಾಗಲಿಲ್ಲ.


10. ಚಕ್ಕವತ್ತಿ (ಚಕ್ರವತರ್ಿ ಪ್ರಶ್ನೆ) ಪನ್ಹಾ

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ನಾಲ್ಕು ಗುಣಗಳಾವುವು? (245)
ಓ ಮಹಾರಾಜ, ಹೇಗೆ, ಚಕ್ರವತರ್ಿಯು ತನ್ನ ನಾಲ್ಕು ಧಾತುಗಳಿಂದಾಗಿ ಜನರ ಆದರ ಪ್ರೀತಿ ಗಳಿಸುತ್ತಾನೆ. ಅದೆಂದರೆ ದಾನ, ಸೌಜನ್ಯ, ನ್ಯಾಯಪರತೆ ಮತ್ತು ನಿಷ್ಪಕ್ಷಪಾತ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಇಂತಹ ಗುಣಗಳನ್ನು ಹೊಂದಿ, ಯತ್ನಶೀಲನಾಗಿ, ಭಿಕ್ಷು-ಭಿಕ್ಷುಣಿಯರ, ಉಪಾಸಕ ಉಪಾಸಿಕೆಯರ ಗೌರವ, ಆದರ, ಪಡೆದು ಅವರಲ್ಲಿ ಆನಂದ ತರುವವನಾಗುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಚಕ್ರವತರ್ಿಯು ತನ್ನ ಸಾಮ್ರಾಜ್ಯದಲ್ಲಿ ಯಾವುದೇರೀತಿ ಕಳ್ಳತನವಾಗಲು ಬಿಡುವುದಿಲ್ಲ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನಲ್ಲಿ ಯಾವುದೇರೀತಿಯ ಕಾಮ, ರಾಗ, ದ್ವೇಷ, ಹಿಂಸೆಯ ಯೋಚನೆಗಳು ಉತ್ಪತ್ತಿಯಾಗಲು ಬಿಡುವುದಿಲ್ಲ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ಯಾರು ಕುವಿತರ್ಕಗಳ (ಕೆಟ್ಟ ಯೋಚನೆಗಳು) ಅಳಿವಿನಲ್ಲಿ ಆನಂದಪಡುವರೋ, ಸದಾ ಸ್ಮೃತಿವಂತರಾಗಿ ಲೋಕವು ಯಾವುದರ ಬಗ್ಗೆ ಸುಂದರವೆಂದು ಭಾವಿಸುತ್ತದೋ ಅದರ ಬಗ್ಗೆ ಆಶುಭಗಳ (ಅಸಹ್ಯತೆಯ ಧ್ಯಾನ) ವೃದ್ಧಿಯಲ್ಲಿರುವರೋ ಅಂತಹವನು ಮಾತ್ರ ಮಾರ ಬಂಧನವನ್ನು ಛೇದಿಸುತ್ತಾನೆ.
ಮತ್ತೆ ಓ ಮಹಾರಾಜ, ಹೇಗೆ ಚಕ್ರವತರ್ಿಯು ಪ್ರಜೆಗಳ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ತಿಳಿಯಲು, ಇಡೀ ಜಗತ್ತನ್ನು ಸಾಗರದ ತೀರಗಳನ್ನು ಸಂದಶರ್ಿಸಿ ಪರೀಕ್ಷಿಸುವನೋ ಅದೇರೀತಿ ಧ್ಯಾನಶೀಲ ಭಿಕ್ಷುವು, ಯತ್ನಶೀಲನಾಗಿ, ತನ್ನ ಕ್ರಿಯೆಗಳನ್ನು, ವಾಚಾವನ್ನು ಮತ್ತು ಚಿತ್ತವನ್ನು ಪ್ರತಿನಿತ್ಯವು ಹೀಗೆ ಹೇಳಿಕೊಳ್ಳುತ್ತ ಪರೀಕ್ಷಿಸಿಕೊಳ್ಳುತ್ತಾನೆ. ಈ ಮೂರು ವಿಧವಾಗಿ ನಾನು ಇಂದು ದೋಷರಹಿತವಾಗಿ ನಡೆದುಕೊಂಡನೆ? ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ ತೃತೀಯ ಗುಣವಾಗಿದೆ. ಓ ರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಅಂಗುತ್ತರ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ನಿರಂತರ ಗಂಭೀರತೆಯಿಂದ ಭಿಕ್ಷುವು ತನ್ನನ್ನು ರಾತ್ರಿ-ಹಗಲು ಪರೀಕ್ಷಿಸುತ್ತ, ಹೇಗೆ ರಾತ್ರಿ, ಹಗಲುಗಳು ಬೇಗನೆ ಕಳೆಯುವನೋ ಹೇಗೆ ನನ್ನನ್ನು ಹುಡುಕುವವರು ಕಾಣುವರೋ ಮತ್ತು ಹೇಗೆ ಬಿಡುವುದು ಎಂದು ಯೋಚಿಸುವನು.
ಮತ್ತೆ ಓ ಮಹಾರಾಜ, ಚಕ್ರವತಿಯು ಪೂರ್ಣವಾಗಿ ರಕ್ಷಣೆ ಪಡೆಯುತ್ತಾನೆ. ಆತ ಒಳಗೆ, ಹೊರಗೆ, ಎರಡು ವಿಧದಲ್ಲೂ ರಕ್ಷಣೆ ಹೊಂದುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಯತ್ನಶೀಲನಾಗಿ ಅಕುಶಲದ ವಿರುದ್ಧ ರಕ್ಷಣೆ ಪಡೆಯಲು ದ್ವಾರಪಾಲಕನಂತೆ ಎಚ್ಚರವಹಿಸುತ್ತಾನೆ. ಎಲ್ಲಾ ಇಂದ್ರಿಯಗಳಲ್ಲಿ ಸ್ಮೃತಿ ವಹಿಸುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ಚಕ್ರವತರ್ಿಯ 4ನೇ ಗುಣವಾಗಿದೆ. ಇದರ ಬಗ್ಗೆ ದೇವಾದಿದೇವ ಭಗವಾನರು ಹೀಗೆ ಹೇಳಿದ್ದಾರೆ:
ದ್ವಾರಗಳಲ್ಲಿ ಜಾಗ್ರತನಾಗಿರು ಭಿಕ್ಷುವೇ, ಆರಿಯ ಶ್ರಾವಕನು ಅಕುಶಲವನ್ನು ತೊರೆಯುತ್ತಾನೆ, ಕುಶಲವನ್ನು ವೃದ್ಧಿಸುತ್ತಾನೆ, ವಜ್ರ್ಯವಾದುದ್ದನ್ನು, ದೋಷವಾದುದನ್ನು ತೊರೆಯುತ್ತಾನೆ, ದೋಷರಹಿತವಾದುದನ್ನು ವೃದ್ಧಿಸುತ್ತಾನೆ, ಪರಿಶುದ್ಧತೆಯನ್ನು ಸಂರಕ್ಷಿಸುತ್ತಾನೆ.
(ಮೂರನೆಯ ಪಠವಿ ವಗ್ಗೊ ಮುಗಿಯಿತು 

Milinda panha 11.2. ಸಮುದ್ರ ವರ್ಗ (ಸಮುದ್ರೊ ವಗ್ಗೋ)

2. ಸಮುದ್ರ ವರ್ಗ (ಸಮುದ್ರೊ ವಗ್ಗೋ)

1. ಲಾಬುಲತಾಂಗ ಪನ್ಹೊ (ಕುಂಬಳ ಬಳ್ಳಿಯ ಪ್ರಶ್ನೆ)


ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ, ಕುಂಬಳ ಬಳ್ಳಿಯ ಒಂದು ಗುಣ ಯಾವುದು? (226)

ಓ ಮಹಾರಾಜ, ಹೇಗೆ ಕುಂಬಳ ಬಳ್ಳಿಯು ಮೇಲಕ್ಕೆಯೇ ಸುತ್ತುತ್ತಾ ಪರವೃಕ್ಷಕ್ಕೆ ಅಥವಾ ಹುಲ್ಲಿಗೆ ಅಥವಾ ಮುಳ್ಳಿಗೆ ಅಥವಾ ಬಳ್ಳಿಗೆಯೇ ಹೊಂದುತ್ತಾ ಬೆಳೆಯುವುದೋ ಹಾಗೆಯೇ ಓ ಮಹಾರಾಜ, ಭಿಕ್ಷುವು, ಧ್ಯಾನಿಯು, ಪ್ರಯತ್ನಶಾಲಿಯು ಆದ ಅತನು ಅರಹತ್ವದ ಎತ್ತರಕ್ಕೆ ಬೆಳೆಯಲು ಇಚ್ಛಿಸುತ್ತಾನೆ. ಅದಕ್ಕಾಗಿ ಧ್ಯಾನ ವಿಷಯಗಳಲ್ಲಿ ತಲ್ಲೀನನಾಗಿ ಸಮಾಧಿಯ ಹಂತಗಳನ್ನು ದಾಟುತ್ತಾನೆ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಕುಂಬಳ ಬಳ್ಳಿಯ ಒಂದು ಗುಣವಾಗಿದೆ. ಇದರ ಬಗ್ಗೆ ಧಮ್ಮ ಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಹೇಗೆ ಕುಂಬಳ ಗಿಡವು ತನ್ನ ಬಳ್ಳಿಗಳಿಂದಾಗಿ ಬೆಳೆಯುವುದೋ ಹುಲ್ಲಿಗಾಗಲಿ, ಮುಳ್ಳಿಗಾಗಲಿ, ಬಳ್ಳಿಗಾಗಲಿ, ಆಸರೆ ಪಡೆದು ವಿಶಾಲವಾಗಿ ಹಬ್ಬುವುದೋ ಹಾಗೆಯೇ ಬುದ್ಧಪುತ್ರರು ಅರಹಂತತ್ವಕ್ಕೆ ಬಾಗಿ ಧ್ಯಾನಹಂತಗಳನ್ನು ಹತ್ತಿ ಪೂರ್ಣತೆ ಮತ್ತು ಶಾಂತಿಯೆಡೆಗೆ ಧಾವಿಸುತ್ತಾರೆ.

2. ಪದ್ಮಾಂಗ ಪನ್ಹೊ (ಪದ್ಮದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷು ಹೊಂದಬೇಕಾದ ಪದ್ಮದ 3 ಗುಣಗಳಾವುವು? (227)
ಓ ಮಹಾರಾಜ, ಹೇಗೆ ಕಮಲವು ಜಲದಲ್ಲೇ ಜನಿಸಿದರೂ ಜಲದಲ್ಲೇ ಬೆಳೆದರೂ, ಜಲದಿಂದ ಅದು ಅಂಟುವುದಿಲ್ಲ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಖುವು, ಜಾಗರೂಕನಾಗಿ, ತನಗೆ ಏನೇ ಸಿಗಲಿ ಅದಕ್ಕೆ ಅಂಟುವುದಿಲ್ಲ. ಅಥವಾ ಪರರಿಗೆ ಏನೇ ಸಿಗಲಿ, ಸಹಭಿಕ್ಷುಗಳು ಏನೇ ನೀಡಲಿ, ಅದಕ್ಕೆ ಅಂಟುವುದಿಲ್ಲ. ಹಾಗೆಯೇ ಕೀತರ್ಿಗಾಗಲಿ, ಗೌರವಕ್ಕಾಗಲಿ, ಪೂಜೆ ಅಥವಾ ಪರಿಕರಗಳಿಗೆ ಅಂಟುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷು ಹೊಂದಬೇಕಾದ ಪದ್ಮದ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಪದ್ಮವು ನೀರಿನಿಂದ ಎತ್ತರಕ್ಕೆ ಎತ್ತಿ ನಿಂತಿರುವುದೋ ಹಾಗೆಯೇ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಾಪಂಚಿಕತೆ ಮತ್ತು ಪ್ರಾಪಂಚಿಕ ವಸ್ತುಗಳಿಂದ ಅತಿ ಎತ್ತರಕ್ಕೆ ಅಂಟದೆ ಜೀವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪದ್ಮದ ಎರಡನೆಯ ಗುಣವಾಗಿದೆ.
ಮತ್ತೆ ಓ ರಾಜ, ಹೇಗೆ ಪದ್ಮವು ಅತಿಸೂಕ್ಷ್ಮ ತಂಗಾಳಿಗೂ ಸಹಾ ಕಂಪಿಸುವುದೋ ಹಾಗೆಯೇ ಮಹಾರಾಜ, ಭಿಕ್ಷುವು ಸಹಾ ಧ್ಯಾನಶೀಲನಾಗಿ ಯತ್ನಶೀಲನಾಗಿ, ಸಂಯಮ ಪಾಲಿಸುತ್ತಾನೆ. ಆತನು ಅಣುವಿನಷ್ಟು ತಪ್ಪಿಗೂ ಹೆದರಿ ಜೀವಿಸುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಪದ್ಮದ ಮೂರನೆಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ದೇವಾದಿದೇವರಾಗಿರುವ ಭಗವಾನರು ಹೀಗೆ ಹೇಳಿದ್ದಾರೆ:
ಅಣುವಿನಷ್ಟು ಅಲ್ಪ ತಪ್ಪಿಗೂ ಅಪಾಯ ಕಂಡು ಭೀತನಾಗಿ ಕಂಡು, ಆತನು ಶೀಲ, ಸಂಯಮಗಳನ್ನು ನಿಷ್ಠೆಯಿಂದ ಪಾಲಿಸಿ ಸುಶಿಕ್ಷಿತನಾಗುತ್ತಾನೆ.

3. ಬೀಜಂಗ ಪನ್ಹೊ (ಬೀಜದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಬೀಜದ ಯಾವ 2 ಗುಣಗಳನ್ನು ಹೊಂದಿರ ಬೇಕು? (228)
ಓ ಮಹಾರಾಜ, ಹೇಗೆ ಬೀಜವು ಚಿಕ್ಕದಾಗಿದ್ದರೂ ಅದನ್ನು ಮಣ್ಣಿನಲ್ಲಿ ಬಿತ್ತಿದಾಗ, ಮಳೆಬಿದ್ದು, ನಂತರ ಅದು ಹೇರಳವಾದ ಫಲವು ನೀಡುತ್ತದೆ. ಅದೇರೀತಿಯಾಗಿ ಓ ಮಹಾರಾಜ, ಧ್ಯಾನಶೀಲ ಭಿಕ್ಖುವು ಪ್ರಯತ್ನಶೀಲನಾಗಿ, ಯೋಗ್ಯರೀತಿಯಲ್ಲಿ ತನ್ನನ್ನು ನಡೆಸಿಕೊಂಡರೆ ಸಮಣತ್ವದ ಫಲಗಳನ್ನು ಹೇರಳವಾಗಿ ಪಡೆಯುತ್ತಾನೆ. ಓ ಮಹಾರಾಜ, ಬೀಜದಲ್ಲಿನ ಪ್ರಥಮ ಗುಣವು ಇದೇ ಆಗಿದೆ.
ಮತ್ತೆ ಓ ಮಹಾರಾಜ, ಬೀಜವನ್ನು ಉತ್ತಮ ಫಲವತ್ತಾದ ಮಣ್ಣಿನಲ್ಲಿ ಬಿತ್ತಿದರೆ ಅದು ಬೇಗ ಪಕ್ವತೆಗೆ ಬರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಇಚ್ಛಾಶಕ್ತಿಯಿಂದ ಮನಸ್ಸನ್ನು ಚೆನ್ನಾಗಿ ಪಳಗಿಸಿದಾಗ, ಏಕಾಂತತೆಯಲ್ಲಿ ನೆಲೆಸಿ ಪರಿಶುದ್ಧಗೊಳಿಸಿದಾಗ ಪಕ್ವತೆಯು ಬೇಗನೆ ಲಭಿಸುವುದು. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಬೀಜದ ದ್ವಿತೀಯ ಗುಣವಾಗಿದೆ. ಇದರ ಬಗ್ಗೆ ಥೇರ ಅನುರುದ್ಧರು ಹೀಗೆ ಹೇಳಿದ್ದಾರೆ:
ಫಲವತ್ತಾದ ನೆಲದಲ್ಲಿ ಬೀಜ ಬಿತ್ತಿದಾಗ ಹೇರಳವಾದ ಫಲಗಳು ದೊರೆಯುತ್ತದೆ. ಆಗ ರೈತನಿಗೆ ಆನಂದವಾಗುತ್ತದೆ. ಹಾಗೆಯೇ ಭಿಕ್ಷುವು ಏಕಾಂತತೆಯಲ್ಲಿ ನೆಲೆಸಿ, ಸತಿಪಟ್ಠಾನಗಳನ್ನು ವೃದ್ಧಿಸಿದಾಗ, ಫಲ ಲಭಿಸಿ ಭಿಕ್ಖುವು ಆನಂದಿಸುತ್ತಾನೆ.

4. ಸಾಲಕಲ್ಯಾಣಿರಂಗ ಪನ್ಹೊ

ಭಂತೆ ನಾಗಸೇನ, ಭಿಕ್ಖುವು ಸಾಲವೃಕ್ಷದ ಯಾವ ಒಂದು ಗುಣವನ್ನು ಹೊಂದಿರುತ್ತಾನೆ? (229)
ಓ ಮಹಾರಾಜ ಹೇಗೆ ಸಾಲವೃಕ್ಷವು ಭೂಮಿಯ ಒಳಕ್ಕೆ ನೂರು ಗಜಕ್ಕೂ ಹೆಚ್ಚಿನ ಆಳದಲ್ಲಿರುತ್ತದೆಯೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ನಿಷ್ಠನಾಗಿ, ಏಕಾಂತತೆಯಲ್ಲಿ ತಲ್ಲೀನನಾಗಿ, ಸಮಣತ್ವದ ನಾಲ್ಕು ಫಲಗಳನ್ನು ಪಡೆಯುತ್ತಾನೆ. ಆರು ಅಭಿಜ್ಞಾಗಳನ್ನು ನಾಲ್ಕು ಪಟಿಸಂಬಿದಾ ಜ್ಞಾನಗಳನ್ನು ಮತ್ತು ಭಿಕ್ಖುಗಳ ಎಲ್ಲಾ ಗುಣಗಳನ್ನು ಪಡೆಯುತ್ತಾನೆ. ಇದೇ ಓ ಮಹಾರಾಜ, ಸಾಲವೃಕ್ಷದ ಒಂದು ಗುಣವನ್ನು ಭಿಕ್ಖುವು ಹೊಂದಿರುತ್ತಾ. ಓ ಮಹಾರಾಜ, ಇದರ ಬಗ್ಗೆ ರಾಹುಲ ಥೇರರು ಹೀಗೆ ಹೇಳಿದ್ದಾರೆ:
ಯಾವ ಮರವು ಭೂಮಿಯ ಮೇಲೆ ಮತ್ತು ಭೂಮಿಯ ಅಂತರದಲ್ಲೂ ನೂರು ಗಜಕ್ಕೂ ಹೆಚ್ಚಿನ ಆಳವಿರುವುದೋ ಅದಕ್ಕೆ ಸಾಲವೃಕ್ಷ ಎನ್ನುತ್ತಾರೆ. ಆ ಮರದ ಮೇಲ್ಭಾಗವು ದಿನಕ್ಕೆ ನೂರುಗಜ ಬೆಳೆಯುತ್ತದೆ, ಅದೇರೀತಿಯಾಗಿ ಏಕಾಂತತೆಯಲ್ಲಿ ನೆಲೆಸಿ ಚಿತ್ತ ಅಭಿವೃದ್ಧಿಯನ್ನು ನಾನು ಸಹಾ ಸಾಲವೃಕ್ಷದಂತೆ ಬೆಳೆಸಿರುವೆ ಓ ಮಹಾವೀರರೇ.


5. ನಾವಂಗ ಪನ್ಹೊ (ನಾವೆಯ ಪ್ರಶ್ನೆ)

ಭಂತೆ ನಾಗಸೇನ, ನಾವೆಯ ಯಾವ 3 ಗುಣಗಳನ್ನು ಭಿಕ್ಷು ಹೊಂದಿರ
ಬೇಕು? (230)

ಓ ಮಹಾರಾಜ, ಹೇಗೆ ನಾವೆಯು ವಿವಿಧರೀತಿಯ ಮರದ ತುಂಡುಗಳಿಂದ ರಚಿತವಾಗಿರುತ್ತದೋ, ಹಾಗು ಹಲವಾರು ಜನರನ್ನು ದಡ ಮುಟ್ಟಿಸಿದೆಯೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಅಪಾರ ಪ್ರಯತ್ನದಿಂದ ಆತನು ಸುಗತಿಯಲ್ಲೇ ಇರಲಿ ಅಥವಾ ಭೂಮಿಯಲ್ಲೇ ಇರಲಿ, ಸರ್ವಲೋಕಗಳಲ್ಲಿ ಇರುವಿಕೆಯನ್ನೇ ದಾಟಿದ್ದಾನೆ. ಹಾಗೆಯೇ ನಾನಾವಿಧವಾದ ಗುಣಗಳ ವೈವಿಧ್ಯತೆಯಿಂದ ಆತನ ಶೀಲವು ರಚಿತವಾಗಿರುತ್ತದೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವೆಯ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ನಾವೆಯು ನಾನಾರೀತಿಯ ಅಲೆಗಳ ಹೊಡೆತಗಳನ್ನು, ಸುಳಿಗಳ ಪೆಟ್ಟುಗಳನ್ನು ಸಹಿಸುತ್ತದೋ ಅದೇರೀತಿಯಾಗಿ ಓ ಮಹಾರಾಜ, ದಾನಶೀಲ ಭಿಕ್ಷುವು ಸಹಾ ಪಾಪಗಳ ಪ್ರವೃತ್ತಿಯನ್ನು, ಪ್ರಚೋದಕಗಳನ್ನು ಲಾಭ ಸತ್ಕಾರಗಳನ್ನು, ಸ್ತುತಿಯನ್ನು, ಪೂಜೆ ವಂದನೆಗಳನ್ನು ಹಾಗೆಯೇ ನಿಂದೆ, ಪ್ರಶಂಸೆ, ಸುಖದುಃಖಗಳಿಂದ ಆತನು ಪ್ರಚೋದಿತನಾಗುವುದಿಲ್ಲ. ಶಾಂತವಾಗಿದ್ದು ಸಹಿಸಿಕೊಳ್ಳುತ್ತಾನೆ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವೆಯ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಭಿಕ್ಷು ಹೊಂದಬೇಕಾದ ನಾವೆಯ ತೃತೀಯ ಗುಣವು ಯಾವುದು? ಮತ್ತೆ ಇಲ್ಲಿ ಓ ಮಹಾರಾಜ, ನಾವೆಯು ಅಳೆಯಲಾಗದ ಅನಂತವಾದ ಸಾಗರಗಳನ್ನು ದಾಟಿಸುತ್ತದೆ. ಮಧ್ಯದಲ್ಲೂ ಕಂಪನವಾಗುವುದಿಲ್ಲ, ಘಜರ್ಿಸುತ್ತ ಶಬ್ದವನ್ನುಂಟು ಮಾಡುತ್ತ ಸಾಗುತ್ತದೆ. ಸಾಗರವು ಎಲ್ಲಾ ವಿಧವಾದ ಮೀನುಗಳಿಂದ ರಾಕ್ಷಸಕಾರದ ಜೀವಿಗಳಿಂದ, ತಿಮಿಂಗಿಲ, ಮೊಸಳೆ ಇತ್ಯಾದಿಗಳಿಂದ ತುಂಬಿರುವ ಜೀವಿಗಳಿಂದ ತುಂಬಿರುವ ಸಾಗರವನ್ನು ದಾಟುತ್ತದೆಯೋ, ಅದೇರೀತಿಯಲ್ಲಿ ಓ ಮಹಾರಾಜ, ದ್ಯಾನಶೀಲ ಭಿಕ್ಷುವು ನಾಲ್ಕು ಆರ್ಯಸತ್ಯಗಳ, ತ್ರಿವಿಧ ವಗರ್ಿಕರಣ, ಅವುಗಳ 12 ವಿಧದ ರಚನೆಯನ್ನು ಒಳಗೊಂಡ ಪ್ರಜ್ಞಾಲೋಕದಲ್ಲಿ ಪ್ರಯಾಣವನ್ನು ಮಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವೆಯ ತೃತೀಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ದೇವಾದಿದೇವ ಭಗವಾನರು ಸಂಯುಕ್ತ ನಿಕಾಯದಲ್ಲಿ ಸಚ್ಚ ಸಂಯುಕ್ತದಲ್ಲಿ ಹೀಗೆ ಹೇಳಿದ್ದಾರೆ:
ಓ ಭಿಕ್ಷುಗಳೇ, ನೀವು ಯಾವಾಗಲಾದರು ಯೋಚಿಸುವಾಗ ಹೀಗೆಯೇ ಯೋಚಿಸಿ: ದುಃಖವು ಹೀಗಿರುತ್ತದೆ, ದುಃಖದ ಉದಯವು ಹೀಗೆ ಆಗುತ್ತದೆ, ದುಃಖದ ಅಂತ್ಯವು ಹೀಗೆ ಆಗುತ್ತದೆ, ದುಃಖದ ನಿರೋಧ ಮಾರ್ಗವು ಹೀಗಿರುತ್ತದೆ.

6. ನಾವಲಿಗ್ಗ ಏಕಂಗ ಪನ್ಹೊ (ನಾವೆಯ ಲಂಗರಿನ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಲಂಗರಿನ 2 ಗುಣಗಳಾವುವು?(231)
ಓ ಮಹಾರಾಜ, ಹೇಗೆ ಲಂಗರು ಅಲೆಗಳಿಂದ ಕೂಡಿದ ದಟ್ಟ ವಾತಾವರಣದಲ್ಲೂ, ಅಪಾರ ನೀರಿನಲ್ಲೂ ನಾವೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಸ್ಥಿರವಾಗಿ ನಿಲ್ಲುವಂತೆ ಮಾಡುತ್ತದೆ. ಸಮುದ್ರವು ನಾನಾ ದಿಕ್ಕುಗಳಲ್ಲಿ ಎಳೆಯುವಂತೆ ಲಂಗರು ಮಾಡುತ್ತದೆ. ಸಮತೋಲನ ಕಾಪಾಡಿ, ಸ್ಥಿರತೆಯುತ ಚಲನೆಗೆ ಸಹಾಯ ಮಾಡುತ್ತದೆ. ಓ ಮಹಾರಾಜ, ಅದೇರೀತಿಯಲ್ಲಿ ಧ್ಯಾನಶೀಲ ಭಿಕ್ಷುವು ಸಹಾ ಪರಿಶ್ರಮಯುತನಾಗುತ್ತಾನೆ. ಯೋಚನೆಗಳ ಮಹಾ ಸಂಗ್ರಾಮದಲ್ಲಿ ಚಿತ್ತವನ್ನು ಸ್ಥಿರವಾಗಿಡುತ್ತಾನೆ. ಮಾನಸ ಸಮುದ್ರದಲ್ಲಿ ರಾಗದ, ದ್ವೇಷದ, ಮೋಹದ ಅಲೆಗಳಿಂದಾಗಿ ಹಾದಿ ತಪ್ಪುವುದಿಲ್ಲ. ಇದೇ ಓ ಮಹಾರಾಜ ಭಿಕ್ಷುವು ಹೊಂದಬೇಕಾದ ಲಂಗರಿನ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಲಂಗರು ತೇಲುವುದಿಲ್ಲವೋ ಆದರೆ ಮುಳುಗುವುದೋ ಮತ್ತು ಜಲವು ನೂರು ಗಜಗಳಷ್ಟು ಆಳದಲ್ಲಿದ್ದರೂ ನಾವೆಯನ್ನು ಹಿಡಿತದಲ್ಲಿಟ್ಟು ವೇಗ ಹೆಚ್ಚಿಸುತ್ತದೆ, ವಿಶ್ರಾಂತಿಗೆ ತರುತ್ತದೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನಶೀಲದಿಂದ ಕೂಡಿರುತ್ತಾನೆ. ಆತನು ಲಾಭ, ಯಶಸ್ಸು, ಸತ್ಕಾರ, ಮಾನ್ಯತೆ, ವಂದನೆ, ಪೂಜೆ ಇವುಗಳೆಲ್ಲವೂ ಲಭಿಸಿದರೂ ಸಹಾ ಆತನ ಚಿತ್ತವೂ ಉದ್ವೇಗವಾಗಿ ಉಬ್ಬಿಹೋಗುವುದಿಲ್ಲ. ಆದರೆ ಚಿತ್ತವನ್ನು ಸ್ಥಿರವಾಗಿಟ್ಟು, ಶರೀರವನ್ನು ಜೀವಂತವಾಗಿರುಸುವಿಕೆಯ ಹೊರತು ಬೇರ್ಯಾವ ಸಾಧಾರಣ ಬಯಕೆಯಿರುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಲಂಗರಿನ ದ್ವಿತೀಯ ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಸಾರಿಪುತ್ತರು ಹೀಗೆ ಹೇಳಿದ್ದಾರೆ:
ಹೇಗೆ ಲಂಗರು ತೇಲುವುದಿಲ್ಲವೋ, ಆದರೆ ಅಲೆಗಳ ಕೆಳಗೆ ಮುಳುಗುವುದೋ, ಹಾಗೆಯೇ ಸ್ತುತಿ ಅಥವಾ ದಾನಗಳಲ್ಲಿ ಉಬ್ಬಿಹೋಗದೆ ವಿನಮ್ರನಾಗಲಿ.

7. ಕುಪಂಗ ಪನ್ಹೊ (ಧ್ವಜಸ್ತಂಭದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಧ್ವಜಸ್ತಂಭದ ಒಂದು ಗುಣ ಯಾವುದು? (232)
ಓ ಮಹಾರಾಜ, ಹೇಗೆ ಆಧಾರಸ್ತಂಭವು ಹಗ್ಗಗಳನ್ನು, ಕಟ್ಟುಗಳನ್ನು, ನೌಕಪಟಗಳನ್ನು ಕರೆದೊಯ್ಯುತ್ತದೋ ಹಾಗೆಯೇ ಧ್ಯಾನಶೀಲಭಿಕ್ಷುವು ಸದಾ ಜಾಗರೂಕನಾಗಿ, ಸ್ಪಷ್ಟವಾದ ಅರಿವಿನಿಂದ ಕೂಡಿ, ಆ ಜಾಗೃತಭಾವವನ್ನು ತನ್ನೆಲ್ಲಾ ಚಟುವಟಿಕೆಯಲ್ಲಿ ಭಂಗಿಗಳಲ್ಲಿ ಸ್ಥಾಪನೆ ಮಾಡುತ್ತಾನೆ. ಹೇಗೆಂದರೆ ತಿರುಗಾಡುವುದಾಗಲಿ, ನೋಡುವಾಗಲಾಗಲಿ, ಕೈಗಳನ್ನು ಮಡಚುವಾಗ ಆಗಲಿ, ಅಥವಾ ತೆರೆಯುವಾಗ ಆಗಲಿ, ಚೀವರವನ್ನು ಧರಿಸುವಾಗ ಆಗಲಿ, ಪಿಂಡಪಾತ್ರೆ ಹಿಡಿಯುವಾಗ ಆಗಲಿ, ತಿನ್ನುವಾಗ, ನೀರು ಕುಡಿಯುವಾಗ, ಅಗಿಯುವಾಗ, ರುಚಿ ನೋಡುವಾಗ, ನಡೆಯುವಾಗ, ನಿಂತಿರುವಾಗ, ಕುಳಿತಿರುವಾಗ )ಅಥವಾ ಮಲಗಿರುವಾಗ, ಮಾತನಾಡುವಾಗ, ಮೌನವಾಗಿರುವಾಗ, ಹೀಗೆ ಎಂದಿಗೂ ತನ್ನ ಸ್ಮೃತಿ ಸ್ಪಷ್ಟ ಅರಿವನ್ನು ಸಡಿಲ ಮಾಡುವುದಿಲ್ಲ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ಧ್ವಜಸ್ತಂಭದ ಒಂದು ಗುಣವಾಗಿದೆ. ಓ ಮಹಾರಾಜ, ಇದರ ಬಗ್ಗೆ ಭಗವಾನರು ದೇವಾದಿದೇವರು ಆಗಿರುವಂತಹ ಬುದ್ಧರು ಸಹಾ ಹೀಗೆ ಹೇಳಿರುವರು:
ಜಾಗೃತಭಾವದಿಂದಿರಿ ಓ ಭಿಕ್ಷುಗಳೇ, ಸ್ಮೃತಿ ಸ್ಪಷ್ಟ ಅರಿವಿನಿಂದ ಕೂಡಿರಿ. ಇದೇ ನಿಮಗೆ ನೀಡುವ ಉಪದೇಶವಾಗಿದೆ.


8. ನಿಯಾಮಕಂಗ ಪನ್ಹೋ (ನಾವಿಕ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ನಾವಿಕನ 3 ಗುಣಗಳು
ಯಾವುದು? (233)
ಓ ಮಹಾರಾಜ, ಹೇಗೆ ನಾವಿಕನು ಹಗಲು-ರಾತ್ರಿ ತನ್ನ ನಿರಂತರ, ಸತತ ಉತ್ಸಾಹಯುತವಾದ ಪರಿಶ್ರಮದಿಂದ ನಾವೆಯನ್ನು ಓಡಿಸುತ್ತಾನೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ರಾತ್ರಿ-ಹಗಲು ಉತ್ಸಾಹಿತನಾಗಿ ನಿರಂತರ ಸತತ ಧ್ಯಾನಾಭ್ಯಾಸ ಮಾಡುತ್ತಾನೆ. ಯೋಗ್ಯವಾದ ಜ್ಞಾನಯುತ ಗಮನಹರಿಸುವಿಕೆಯಿಂದ, ಚಿತ್ತವನ್ನು ಇಟ್ಟು, ಚಿತ್ತಾಭಿವೃದ್ಧಿ ಮಾಡುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಲೇಬೇಕಾಗಿರುವಂತಹ ನಾವಿಕನ ಗುಣವಾಗಿದೆ. ಓ ಮಹಾರಾಜ, ದೇವಾದಿದೇವರಾದ ಭಗವಾನರು ಧಮ್ಮಪಥದಲ್ಲಿ ಹೀಗೆ ಹೇಳಿದ್ದಾರೆ:
ಹೇಗೆ ಕೆಸರಿನಲ್ಲಿ ಸಿಲುಕಿರುವ ಆನೆಯು ತನ್ನ ಪರಾಕ್ರಮದಿಂದ ಹೇಗೆ ಹೊರಬರುವುದೋ, ಅದೇರೀತಿಯಲ್ಲಿ ಉತ್ಸಾಹಿತನಾಗಿ, ಚಿತ್ತವನ್ನು ಜಾಗೃತ ಭಾವದಲ್ಲಿರಿಸು. ಚೆನ್ನಾಗಿ ಚಿತ್ತವನ್ನು ಪಹರೆ ಮಾಡುತ್ತ, ಪಾಪಗಳ ಕೆಸರಿನಿಂದ ಹೊರಬಾ.
ಮತ್ತೆ ಓ ಮಹಾರಾಜ, ಹೇಗೆ ನಾವಿಕನಿಗೆ ಸಾಗರದಲ್ಲಿ ಇರುವಂತಹ ಪ್ರತಿಯೊಂದು ತಿಳಿದಿರುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದು ಸಹಾ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಲ್ಲಿ ದೃಢನಾಗಿ, ಪಾಪದಿಂದ ಪುಣ್ಯವನ್ನು ತಿಳಿಯುವಂತೆ ಯಾವುದು ತಪ್ಪು ಮತ್ತು ಯಾವುದು ಸರಿ, ಯಾವುದು ಉಚ್ಚ ಮತ್ತು ಯಾವುದು ಶ್ರೇಷ್ಠ, ಯಾವುದು ಕತ್ತಲು ಮತ್ತು ಯಾವುದು ಬೆಳಕು ಎಂದೆಲ್ಲಾ ಅರಿತಿರುತ್ತಾನೆ. ಇದೇ ಓ ಮಹಾರಾಜ, ಭಿಕ್ಷುವು ಹೊಂದಬೇಕಾದ ನಾವಿಕನ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ನಾವಿಕನು ಯಂತ್ರಗಳ ಮೇಲೆ ಮುದ್ರೆ ಹಾಕುವಂತೆ, ಯಾರು ಆ ಯಂತ್ರಗಳನ್ನು ಮುಟ್ಟದಿರುವಂತೆ ಮಾಡಿರುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸ್ವ-ನಿಯಂತ್ರಣದ ಮುದ್ರೆ ಹಾಕಿಕೊಂಡಿರುತ್ತಾನೆ. ಆತನು ಯಾವುದೇ ಅಕುಶಲ ಯೋಚನೆಗಳು ಉಂಟಾಗದಿರುವಂತೆ ನೋಡಿಕೊಳ್ಳುತ್ತಾನೆ. ಇದೇ ಮಹಾರಾಜ ಇದರ ಬಗ್ಗೆ ದೇವಾದಿದೇವರಾದ ಭಗವಾನರು ಸಂಯುಕ್ತ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ:
ಓ ಭಿಕ್ಷುಗಳೇ, ಅಕುಶಲ ವಿತರ್ಕ (ಯೋಚನೆಗಳು) ಉಂಟಾಗದಂತೆ ನೋಡಿಕೊಳ್ಳಿ. ಅದೆಂದರೆ ಕಾಮವಿತರ್ಕ, ದ್ವೇಷವಿತರ್ಕ, ಹಿಂಸಾವಿತರ್ಕಗಳು.

9. ಕಮ್ಮಕಾರಂಗ ಪನ್ಹೋ (ಕುಶಲಕಮರ್ಿ ನಾವಿಕ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಹೊಂದಬೇಕಾದ ಕುಶಲಕಮರ್ಿ ನಾವಿಕನ ಒಂದು ಗುಣವು ಯಾವುದು? (234)
ಓ ಮಹಾರಾಜ, ಹೇಗೆ ಕುಶಲಕಮರ್ಿ ನಾವಿಕನು ಹಡಗಿನಲ್ಲಿದ್ದಾಗ ಹೀಗೆ ಯೋಚಿಸುತ್ತಾನೆ: ನಾನು ಕೆಲಸದವನಾಗಿದ್ದೇನೆ, ನಾನು ಈ ಹಡಗಿನಲ್ಲಿ ಕೆಲಸಕ್ಕಿದ್ದೇನೆ. ಈ ಹಡಗಿನಂತೆ ನಾನು ಆಹಾರ ವಸ್ತ್ರಗಳನ್ನು ಪಡೆಯುತ್ತಿದ್ದೇನೆ. ನಾನು ಸೋಮಾರಿಯಾಗಿರಬಾರದು. ಆದರೆ ಪರಿಶ್ರಮದಿಂದ ಹಡಗನ್ನು ಓಡಿಸಬೇಕು. ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ಈ ರೀತಿ ಯೋಚಿಸುತ್ತಾನೆ. ನನ್ನಲ್ಲಿ ನಾಲ್ಕು ಮಹಾಭೂತಗಳಿಂದ ಕೂಡಿರುವ, ದೇಹವಿದೆ. ನಾನು ಸದಾ ಸ್ಮೃತಿವಂತನಾಗಿ, ಅಪ್ರಮತ್ತನಾಗಿ, ಜಾಗ್ರತೆಯಿಂದ, ಸ್ಪಷ್ಟ ಅರಿವಿನಿಂದ, ಧ್ಯಾನ ಸಮಾಪತ್ತಿಯಿಂದ ಪರಿಶ್ರಮಬದ್ಧನಾಗಿ, ಈ ಜನ್ಮ ಜರಾ, ವ್ಯಾಧಿ, ಮರಣ, ಶೋಕ ಇತ್ಯಾದಿಗಳ ದುಃಖ ರಾಶಿಯಿಂದ ಮುಕ್ತನಾಗಬೇಕು. ಇದೇ ಮಹಾರಾಜ, ಕುಶಲಕಮರ್ಿಯ ಒಂದು ಅಂಗವಾಗಿದೆ. ಮಹಾರಾಜ ಇದರ ಬಗ್ಗೆ ಧಮ್ಮಸೇನಾನಿಯಾದ ಸಾರಿಪುತ್ರರು ಹೀಗೆ ಹೇಳಿದ್ದಾರೆ:
ಪುನಃ ಪುನಃ ಕಾಯವನ್ನು ಯಥಾಭೂತವಾಗಿ ಅಥರ್ೈಸಿಕೊಂಡು, ಅದರ ನಿಜಸ್ವರೂಪ ಕಂಡು ದುಃಖರಾಶಿಯನ್ನು ಅಂತ್ಯಗೊಳಿಸಲಿ.

10. ಸಮುದ್ದಂಗ ಪನ್ಹೊ (ಸಮುದ್ರದ ಪ್ರಶ್ನೆ)

ಭಂತೆ ನಾಗಸೇನ, ಭಿಕ್ಷುವು ಸಮುದ್ರದ ಯಾವ 5 ಅಂಗಗಳನ್ನು ಹೊಂದಿರ ಬೇಕು? (235)
ಓ ಮಹಾರಾಜ, ಹೇಗೆ ಸಮುದ್ರವು ಶವಗಳನ್ನು ತನ್ನಲ್ಲಿ ಇಟ್ಟುಕೊಳ್ಳುವುದಿಲ್ಲವೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ತನ್ನ ಪ್ರಯತ್ನದಿಂದಾಗಿ ಕ್ಲೇಷಗಳಾದ ರಾಗ, ದ್ವೇಷ, ಮೋಹ, ಅಹಂಕಾರ, ದೃಷ್ಟಿಕೋನಗಳು, ದೋಷಗಳನ್ನು ಅಡಗಿಸುವುದು, ಇಲ್ಲದ ಸದ್ಗುಣಗಳನ್ನು ಇದೇ ಎಂದು ಪ್ರಶಂಸಿಸಿಕೊಳ್ಳುವುದು, ಈಷರ್ೆ, ಮಾಯಾ, ಮಿಥ್ಯಾ, ಕುಟಿಲತೆ, ವಿಷಮ ದುಷ್ಚರಿತೆಗಳೆಲ್ಲವನ್ನು ಇಟ್ಟುಕೊಳ್ಳುವುದಿಲ್ಲ, ತ್ಯಜಿಸುತ್ತಾನೆ. ಇದೇ ಓ ಮಹಾರಾಜ, ಸಮುದ್ರವು ಹೊಂದಿರುವ ಪ್ರಥಮ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ತನ್ನಲ್ಲಿ ಎಲ್ಲಾ ವಿಧವಾದ ರತ್ನಗಳಾದ ಮುತ್ತು, ವಜ್ರ, ಮಣಿ, ವೈಡೂರಿಯ, ಶಂಖ, ಸಿಲಾ, ಹವಳ, ಇತ್ಯಾದಿ ರತ್ನಗಳನ್ನು ಹೊಂದಿರುತ್ತಾರೆಯೋ ಆದರೆ ಅವನ್ನೆಲ್ಲಾ ಅಡಗಿಸಿಕೊಂಡಿರುತ್ತದೆಯೋ ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಸಹಾ ತನ್ನ ಪರಾಕ್ರಮದಿಂದಾಗಿ ಹಲವಾರು ರತ್ನಗಳನ್ನು ಹೊಂದಿರುತ್ತಾನೆ. ಮಾರ್ಗ, ಫಲ ಮತ್ತು ನಾಲ್ಕು ಧ್ಯಾನಗಳು, ಅಷ್ಟ ವಿಮೋಕ್ಷಗಳು ಮತ್ತು ಸಮಾದಿ ಮತ್ತು ಸಮಾಪತ್ತಿ, ವಿಪಸ್ಸನ ಅಭಿಜ್ಞಾ ಮತ್ತು ಇತ್ಯಾದಿ ವಿವಿಧ ಗುಣರತ್ನಗಳನ್ನು ಹೊಂದಿರುತ್ತಾನೆ. ಆದರೂ ವಿವಿಧ ಗುಣರತ್ನಗಳನ್ನು ಹೊಂದಿರುತ್ತಾನೆ. ಆದರೂ ಅದನ್ನು ತೋರ್ಪಡಿಸಿದೆ ಅಡಗಿಸಿಕೊಂಡಿರುತ್ತಾನೆ. ಇದೇ ಓ ಮಹಾರಾಜ, ಸಮುದ್ರ ಹೊಂದಿರುವ ದ್ವಿತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ಬೃಹತ್ ಜೀವಿಗಳನ್ನು ಹೊಂದಿರುತ್ತದೆಯೋ, ಅದೇರೀತಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಅಲ್ಪೆಚ್ಛೆಯುಳ್ಳ ಸಂತೃಪ್ತಿ ಹೊಂದಿರುವ, ಧೂತಂಗ ಪಾಲನೆಯುಳ್ಳ, ವಾಚಾದಲ್ಲಿ ಶುದ್ಧನಾಗಿರುವ, ಕ್ಲೇಷಮುಕ್ತತೆಗೆ ಮಾರ್ಗದಶರ್ಿಯಾಗಿರುವ ಚಾರಿತ್ರ್ಯ ಹೊಂದಿರುವ, ಸತ್ಯಕ್ಕೆ ಅನುಗುಣವಾದ, ವಿನೀತವಾದ ಸೌಜನ್ಯಯುತ, ಗಾಂಭೀರ್ಯವುಳ್ಳ, ಪೂಜ್ಯರ, ಹಿತಕಾರಿ ಭಾಷಣ ನೀಡುವ, ತಪ್ಪು ತಿಳಿಸುವ, ಸೌಮ್ಯ, ತಪ್ಪು ಮಾಡುವಾಗ ಖಂಡಿಸಿ ತಿದ್ದುವ, ಬೋಧನೆಯಲ್ಲಿ ಚಾತುರ್ಯನಾಗಿರುವ, ವಿದ್ವಾಂಸನಾಗಿರುವ, ಸ್ಫೂತರ್ಿ ನೀಡುವ ಹುರಿದುಂಬಿಸಲು ಸಮರ್ಥನಾದ ಮತ್ತು ಆನಂದ ನೀಡುವಂತಹ ಮಿತ್ರರನ್ನು ಹೊಂದಿರುತ್ತಾನೆ ಮತ್ತು ಅವರೊಂದಿಗೆ ವಾಸಿಸುತ್ತಾನೆ. ಇದೇ ಓ ಮಹಾರಾಜ, ಸಮುದ್ರ ಹೊಂದಿರುವ ತೃತೀಯ ಗುಣವಾಗಿದೆ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ಗಂಗೆಯಿಂದ ಯಮುನದಿಂದ, ಅಚಿರಾವತಿಯಿಂದ, ಸರಭೂವಿನಿಂದ, ಮಾಹಿ ಮತ್ತು ಇತ್ಯಾದಿ ಸಹಸ್ರಾರು ನದಿಗಳಿಂದ ಮತ್ತು ಅಂತರಿಕ್ಷದಿಂದ ಹರಿದುಬರುವ ಮಳೆಯಿಂದಲೂ ಸಹಾ ಸಮುದ್ರವು ತುಂಬುವುದಿಲ್ಲ. ದಡದಿಂದ ನೀರು ಉಕ್ಕಿ ಹರಿಯುವುದಿಲ್ಲ. ಅದೇರೀತಿ ಮತ್ತು ಮಹಾರಾಜ, ಧ್ಯಾನಶೀಲ ಭಿಕ್ಷುವು ಪ್ರಯತ್ನದಲ್ಲಿ ಉತ್ಸಾಹಿತವಾಗಿ, ಪರಿಕರಕ್ಕಾಗಿ ಆಗಲಿ, ಕೀತರ್ಿ ಸ್ತುತಿಗಾಗಲಿ, ಗೌರವ ಆದರಗಳಿಗೆ ಆಗಲಿ ಎಂದಿಗೂ ನಿಯಮ ಉಲ್ಲಂಘನೆ ಮಾಡುವುದಿಲ್ಲ. ಆತನು ತನ್ನ ಪ್ರಾಣರಕ್ಷಣೆಗೂ ಸಹಾ ನಿಯಮ ತಪ್ಪುವುದಿಲ್ಲ. ಇದೇ ಮಹಾರಾಜ, ಸಮುದ್ರವು ಹೊಂದಿರುವ ಹಾಗು ಭಿಕ್ಷುವು ಹೊಂದಬೇಕಾದ ನಾಲ್ಕನೆಯ ಗುಣವಾಗಿದೆ ಮತ್ತು ಓ ಮಹಾರಾಜ, ಇದರ ಬಗ್ಗೆ ದೇವಾದಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ:
ಓ ಮಹಾರಾಜ, ಹೇಗೆ ಮಹಾ ಸಮುದ್ರವು ಸ್ಥಿರವಾಗಿ ನೆಲೆಗೊಳ್ಳುವಿಕೆಯ ಲಕ್ಷಣ ಹೊಂದಿದೆಯೋ ಮತ್ತು ಎಂದಿಗೂ ಅತಿಯಾಗಿ ಉಕ್ಕಿ ಹರಿಯುವುದಿಲ್ಲವೋ, ಅದೇರೀತಿಯಾಗಿ ಓ ಮಹಾರಾಜ, ನನ್ನ ಶಿಷ್ಯರು ಸಹಾ ಎಂದಿಗೂ ನಾನು ಹಾಕಿರುವ ನಿಯಮಗಳ ಉಲ್ಲಂಘನೆ ಮಾಡುವುದಿಲ್ಲ. ಅವರು ತಮ್ಮ ಜೀವ ರಕ್ಷಣೆಗಾಗಿಯು, ನಿಯಮ ತಪ್ಪುವುದಿಲ್ಲ.
ಮತ್ತೆ ಓ ಮಹಾರಾಜ, ಹೇಗೆ ಸಮುದ್ರವು ಗಂಗಾ, ಯಮುನ, ಅಚಿರಾವತಿ, ಸರಭೂ, ಮಾಹಿ ಮತ್ತು ಅಂತರಿಕ್ಷದ ಮಳೆಯಿಂದಲೂ ತುಂಬುವುದಿಲ್ಲವೋ, ಅದೇರೀತಿಯಲ್ಲಿ ಓ ಮಹಾರಾಜ, ಧ್ಯಾನಶೀಲ ಭಿಕ್ಷುವು ಎಂದಿಗೂ ಉಪದೇಶ ಪಡೆಯುವಿಕೆಯಲ್ಲಿ ತೃಪ್ತನಾಗಲಾರ. ಹಾಗೆಯೇ ಪ್ರಶ್ನೆ ಕೇಳುವಿಕೆಯಲ್ಲಿ, ಉತ್ತರ ಆಲಿಸುವಿಕೆಯಲ್ಲಿ ಮತ್ತು ಕಂಠಪಾಠ ಮಾಡುವಿಕೆಯಲ್ಲಿ ಮತ್ತು ಪರೀಕ್ಷೆ ಮಾಡುವಿಕೆಯಲ್ಲಿ, ಧಮ್ಮ ವಿನಯ ಆಲಿಸುವಿಕೆಯಲ್ಲಿ, ಸುತ್ತಾಂತ, ಉಗ್ರಹ, ಪದನಿಕ್ಷೇಪ, ಪದಸಂಧಿ, ಪದವಿಭಕ್ತಿ, ಜೀನಶಾಸನದಲ್ಲಿ ಆತನು ತೃಪ್ತಿಹೊಂದುವುದಿಲ್ಲ. ಇದೇ ಮಹಾರಾಜ, ಭಿಕ್ಷುವು ಹೊಂದಬೇಕಾದ, ಸಮುದ್ರದ 5ನೇ ಗುಣವಾಗಿದೆ. ಇದರ ಬಗ್ಗೆ ಓ ಮಹಾರಾಜ, ದೇವಾದಿದೇವ ಭಗವಾನರು ಸುತಸೋಮ ಜಾತಕದಲ್ಲಿ ಹೀಗೆ ಹೇಳಿದ್ದಾರೆ:
ಹೇಗೆ ಅಗ್ನಿಯು ಉರಿಯುತ್ತಿರುವ ಹುಲ್ಲಿನಿಂದ, ಕಡ್ಡಿಗಳಿಂದ ಎಂದಿಗೂ ತೃಪ್ತವಾಗದೋ ಅಥವಾ ಸಮುದ್ರವು ತನ್ನಲ್ಲಿ ಸೇರುವ ನದಿಗಳಿಂದ ತೃಪ್ತಿಯಾಗದೋ ಹಾಗೆಯೇ ಓ ರಾಜಶ್ರೇಷ್ಠ ಪಂಡಿತರು ಸುಭಾಷಿತಗಳಲ್ಲಿ ಎಂದಿಗೂ ತೃಪ್ತಿ ಹೊಂದಲಾರರು.

ಎರಡನೆಯ ಸಮುದ್ರ ವರ್ಗ ಮುಗಿಯಿತು
(ಈ ವರ್ಗದಲ್ಲಿ ಹತ್ತು ಪ್ರಶ್ನೆಗಳಿವೆ )